ಶಾಲೆಗೆ ಚಕ್ಕರ್ ಹಾಕಲು ಕೋಮುಗಲಭೆಗೆ ಸ್ಕೆಚ್‌ಹಾಕಿದ 10ನೆ ತರಗತಿ ವಿದ್ಯಾರ್ಥಿ !

ಮುಂಬೈ, ಸೆಪ್ಟಂಬರ್ 25: ಶಾಲೆಗೆ ರಜೆಸಿಗಲಿಕ್ಕಾಗಿ ಹತ್ತನೆ ತರಗತಿಯ ವಿದ್ಯಾರ್ಥಿಯೊಬ್ಬ ಕೋಮುಗಲಭೆ ಸೃಷ್ಟಿಸುವುದಕ್ಕಾಗಿ ಯೋಜನೆ ಹಾಕಿ, ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮುಂಬೈಯ ಭಿವಂಡಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಲಿಕೆಯಲ್ಲಿ ಹಿಂದುಳಿದಿದ್ದ ಹತ್ತನೆ ತರಗತಿಯ ಹತ್ತೊಂಬತ್ತು ವರ್ಷ ವಯಸ್ಸಿನ ವಿದ್ಯಾರ್ಥಿ ಹೋಮ್ ವರ್ಕ್ ಕೂಡಾ ಸರಿಯಾಗಿ ಮಾಡಿ ಶಾಲೆಗೆ ಬರುತ್ತಿರಲಿಲ್ಲ, ಆದ್ದರಿಂದ ನಿತ್ಯವೂ ಆತ ಅಧ್ಯಾಪಕರಿಂದ ಶಿಕ್ಷೆಗೊಳಗಾಗುತ್ತಿದ್ದ. ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಆತನಿಗೆ ತುಂಬ ದಿವಸ ರಜೆ ಬೇಕಿತ್ತು. ಆದ್ದರಿಂದ ಆತ ತನ್ನದೇ ಧರ್ಮದ ವಿರುದ್ಧ ಚೀಟಿ ಬರೆದು ಗೋಡೆಯಲ್ಲಿ ಅಂಟಿಸಿದ್ದಾನೆ. ಧರ್ಮ ಮತ್ತು ಅದರ ಆರಾಧನಾ ರೀತಿಗಳನ್ನು ಅವಹೇಳಿದ್ದಾನೆ. ಅವಹೇಳನಕಾರಿ ಚೀಟಿ ಬರೆದು ಅಂಟಿಸಲಾಗುತ್ತಿದೆ ಎಂದು ಧರ್ಮದ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಅವಹೇಳನಕಾರಿಯಾಗಿ ಬರೆದು ಚೀಟಿ ಅಂಟಿಸಿದ್ದ ಆರೋಪಿ ಸಿಗುವವರೆಗೂ ಈ ವಿಷಯವನ್ನು ಬಹಿರಂಗಪಡಿಸಬೇಡಿ ಎಂದು ಸಲಹೆ ನೀಡಿದ್ದರು.
ಆ ನಂತರ ಪೊಲೀಸರು ಚೀಟಿ ಪತ್ತೆಯಾದ ಸ್ಥಳದಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಿದ್ದಾರೆ. ಸೆಪ್ಟಂಬರ್ ಏಳಕ್ಕೆ ಇಂತಹ ಮೊದಲ ಚೀಟಿ ಸಿಕ್ಕಿತ್ತು ಇದಾದ ಹತ್ತು ದಿವಸದ ಬಳಿಕ ಇನ್ನೊಂದು ಚೀಟಿ ಪ್ರತ್ಯಕ್ಷವಾಯಿತು. ಈಸಲ ಸಿಸಿಕ್ಯಾಮರಾ ಅದನ್ನು ಅಂಟಿಸುವ ವಿದ್ಯಾರ್ಥಿಯ ದೃಶ್ಯವನ್ನು ದಾಖಲಿಸಿತ್ತು. ಸಮೀಪದ ನಿವಾಸಿಯಾದ್ದರಿಂದ ವಿದ್ಯಾರ್ಥಿಯನ್ನು ಪತ್ತೆಹಚ್ಚಿ ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸಿದ್ದಾರೆ. ಶಾಲೆಗೆ ರಜೆ ಸಿಗಲು ಹೀಗೆ ಮಾಡಿದೆ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಈ ವಿದ್ಯಾರ್ಥಿ ಪೊಲೀಸರ ವಶದಲ್ಲಿದ್ದಾನೆ ಎಂದು ವರದಿ ತಿಳಿಸಿದೆ.







