ಧರ್ಮಸ್ಥಳದಲ್ಲಿ ಭಜನೋತ್ಸವ ಸಮಾವೇಶ

ಬೆಳ್ತಂಗಡಿ, ಸೆ.25: ಭಗವಂತನ ಸ್ಮರಣೆಯಿಂದ ನಮ್ಮ ಆತ್ಮಶಕ್ತಿ ವೃದ್ಧಿಯಾಗುತ್ತದೆ ಎಂದು ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಮಧುಪಂಡಿತ್ ದಾಸ್ ಹೇಳಿದರು.
ಅವರು ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ ನಡೆದ 18ನೆ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಹಾಗೂ ಭಜನೋತ್ಸವ ಸಮಾವೇಶದಲ್ಲಿ ಮಾತನಾಡಿದರು.
ಭಗವಂತ ಸರ್ವವ್ಯಾಪಿಯಾಗಿದ್ದಾನೆ. ಭಜನೆಯಿಂದ ನಮ್ಮ ಆತ್ಮಕ್ಕೆ ಭಗವಂತನ ನಾಮದಾನವಾಗುತ್ತದೆ. ಇಂದು ಪಟ್ಟಣಗಳಲ್ಲಿ ಆಧ್ಯಾತ್ಮದ ಕಡೆಗೆ ಒಲವು ಕಡಿಮೆಯಾಗುತ್ತಿದ್ದರೂ ಇಲ್ಲಿ ಸಾವಿರಾರು ಮಂದಿ ಭಜನೆಯ ಮೂಲಕ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಿರುವುದನ್ನು ನೋಡಿದರೆ ಹಳ್ಳಿ ಪ್ರದೇಶಗಳಲ್ಲಿ ಆಧ್ಯಾತ್ಮದ ಒಲವು ಇರುವುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಕಲಿಯುಗದಲ್ಲಿ ಯಾವೂದೇ ಖರ್ಚಿಲ್ಲದೆ, ಮಧ್ಯವರ್ತಿಗಳಿಲ್ಲದೆ ನೇರವಾಗಿ ಭಗವಂತನ ಒಲುಮೆಯನ್ನು ಪಡೆಯಲು ಭಜನೆ ಎಂಬುದು ಸುಲಭದ ಮಾಧ್ಯಮವಾಗಿದೆ. ಮನುಷ್ಯನ ಮನದಲ್ಲಿ ಪರಿವರ್ತನೆಯಾಗಲು, ದೇವರ ಮೇಲೆ ಅನನ್ಯ ಭಕ್ತಿ ಉಂಟಾಗಲು ಭಜನೆ ಮುಖ್ಯ ಕಾರಣವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಪ್ರಾರ್ಥನೆ ಮತ್ತು ಧ್ಯಾನಕ್ಕೆ ವ್ಯತ್ಯಾಸವಿದೆ. ಪ್ರಾರ್ಥನೆ ಎಂದರೆ ದೇವರಲ್ಲಿ ನಿವೇದಿಸಿಕೊಳ್ಳುವುದು, ಧ್ಯಾನ ಎಂದರೆ ದೇವರಿಂದ ಉತ್ತರವನ್ನು ಪಡೆದುಕೊಳ್ಳುವುದು. ಭಗವಂತನ ನಾಮಸ್ಮರಣೆಯ ಮೂಲಕ ನಮ್ಮಲ್ಲಿ ಇರುವ ಜಾತಿ-ಮತ- ಪಂಥಗಳ ಭೇದವನ್ನು ಮರೆತು ಬಿಡಬೇಕು ಎಂದರು.
ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ಭಜನಾ ತರಬೇತಿ ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾದ ಯೋಗ ಶಿಕ್ಷಕ ಐ. ಶಶಿಕಾಂತ್ ಜೈನ್, ಎಂ.ಎಸ್.ಗಿರಿಧರ್, ದೇವದಾಸ್ ಪ್ರಭು, ಮೋಹನದಾಸ್ ಶೆಣೈ, ಮಂಗಲದಾಸ್ ಗುಲ್ವಾಡಿ, ತಾರುಣ್ಯಸಾಗರ ದಾಸ್, ರಮೇಶ್ ಕಲ್ಮಾಡಿ, ಶಂಕರ್ ಉಡುಪಿ, ಮನೋರಮಾ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.
ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ ಮಮತಾ ರಾವ್ ವರದಿ ಮಂಡಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು. ಶ್ರೀನಿವಾಸ್ ರಾವ್ ಹಾಗೂ ಗಂಗಾಧರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಸೆ. 18ರಿಂದ ಆರಂಭಗೊಂಡ ಭಜನಾ ಕಮ್ಮಟದಲ್ಲಿ 9 ಜಿಲ್ಲೆಗಳ 131 ಭಜನಾ ಮಂಡಳಿಗಳ 160 ಪುರುಷರು, 60 ಮಹಿಳೆಯರು ಸೇರಿ ಒಟ್ಟು 220 ಮಂದಿ ತರಬೇತಿ ಪಡೆದರು.







