ಸ್ವಚ್ಛ ಮಂಗಳೂರು ಅಭಿಯಾನದ 3ನೆ ಹಂತದ ಮಾಹಿತಿ ಶಿಬಿರ
.jpg)
ಮಂಗಳೂರು, ಸೆ.25: ಮಂಗಳೂರಿನ ಒಳಚರಂಡಿ ವ್ಯವಸ್ಥೆ ಸರಿಯಾದರೆ ಹೆಚ್ಚಿನ ಸಮಸ್ಯೆ ಪರಿಹಾರ ಆಗುತ್ತದೆ. ನಾವು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ರಾಷ್ಟ್ರದಲ್ಲಿ ಮೊದಲ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುವ ಮಠದ ಸೇವೆ ಶ್ಲಾಘನೀಯವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಅವರು ನಗರದ ರಾಮಕೃಷ್ಣ ಮಠದ ಸಭಾಂಗಣದಲ್ಲಿ ರವಿವಾರ ನಡೆದ ಮೂರನೆ ಹಂತದ ಸ್ವಚ್ಛ ಮಂಗಳೂರು ಅಭಿಯಾನದ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಎಂ.ಹರಿನಾಥ್, ಮಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ, ಆರೋಗ್ಯವಂತ ಮತ್ತು ಸುಂದರ ನಗರವಾಗಿ ರೂಪಿಸಲು ಪಣತೊಟ್ಟಿದ್ದು, ನಾಗರಿಕರೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಪ್ಲಾಸ್ಟಿಕ್ ಮುಕ್ತ ನಗರ ಯೋಜನೆ ಸಾಕಾರಗೊಳ್ಳಲು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಟ್ಟೆ ಚೀಲ ನೀಡಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದ್ದೇವೆ. ಕೆಲವೊಮ್ಮೆ ಸುಶಿಕ್ಷಿತರೇ ಚರಂಡಿಗೆ ಕಸ ಎಸೆಯುತ್ತಿರುವುದು ಸಮಸ್ಯೆಯಾಗುತ್ತಿದೆ. ರಾಮಕೃಷ್ಣ ಮಠದ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಪಾಲಿಕೆ ಪೂರ್ಣ ಸಹಕಾರ ನೀಡಲಿದ್ದು, ನಾಗರಿಕರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಮಂಗಳೂರು ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ, ಸ್ವಚ್ಛತೆಯಲ್ಲಿ ದೇಶದಲ್ಲೇ ಕರ್ನಾಟಕ ಮೂರನೆ ಸ್ಥಾನಕ್ಕೆ ಬಂದಿರುವುದು ಹೆಮ್ಮೆಯ ವಿಚಾರ. ಜನರು ಮನಸ್ಸು ಸ್ವಚ್ಛವಾಗಿಟ್ಟು, ಪರಿಸರ ಸ್ವಚ್ಛತೆ ತನ್ನ ಜವಾಬ್ದಾರಿ ಎಂದು ಅರಿತಿರಬೇಕು ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಮಾತನಾಡಿ, ಪರಿಸರ ರಕ್ಷಣೆ ದೇವರ ಕೆಲಸ. ಅಶುದ್ಧಿಯು ಕಾಯಿಲೆಗಳಿಗೆ ಮೂಲ. ಶುಚಿತ್ವದಲ್ಲಿ ಮೊದಲ ಸ್ಥಾನ ಪಡೆದರೆ ಸಾಲದು, ಮನಸ್ಸಿಗೆ ಸಂತೋಷ ಸಿಗಬೇಕು. ಅದಕ್ಕಾಗಿ ಮನೆ, ಪರಿಸರ ಸ್ವಚ್ಛವಾಗಿಡಬೇಕು. ವ್ಯಕ್ತಿ ಶುಚಿಯಾದರೆ ಸಾಲದು, ಸಮಾಜ ಶುಚಿಯಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಣತೊಟ್ಟರೆ ಮುಂದಿನ 50 ವರ್ಷ ಪರಿಸರ ಸ್ವಚ್ಛವಾಗಿರುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಸ್ವಾಗತಿಸಿ, ಶಿಬಿರ ನಡೆಸಿಕೊಟ್ಟರು.







