ಧಾರ್ಮಿಕ ಸಂಘಟನೆಯ ಮುಖಂಡನ ಹತ್ಯೆ: ಕೊಯಂಬತ್ತೂರಿನಲ್ಲಿ ಹಿಂಸೆ, ಕೋಮು ಉದ್ವಿಗ್ನತೆ

ಕೊಯಂಬತ್ತೂರು, ಸೆ.25: ಹಿಂದೂ ಮನ್ನಣಿ ಸಂಘಟನೆಯ ಮಾಧ್ಯಮ ವಕ್ತಾರ ಶಶಿಕುಮಾರ್‌ರ ನ್ನು ಗುರುವಾರ ಭೀಕರವಾಗಿ ಹತ್ಯೆ ಮಾಡಲಾಗಿದ್ದು ಇದರಿಂದ ರೊಚ್ಚಿಗೆದ್ದ ಸಂಘಟನೆಯ ಕಾರ್ಯಕರ್ತರು ಹಿಂಸಾಕೃತ್ಯಕ್ಕೆ ಇಳಿದಿದ್ದು ಕೊಯಂಬತ್ತೂರಿನಲ್ಲಿ ಕೋಮು ಉದ್ವಿಗ್ನತೆಯ ಪರಿಸ್ಥಿತಿ ನೆಲೆಸಿದೆ. ಅಪರಾಧಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿರುವ ದೊಂಬಿನಿರತರು ಮತ್ತೊಂದು ಸಮುದಾಯದವರ ಪ್ರಾರ್ಥನಾ ಮಂದಿರ ಮತ್ತು ಜನರ ಮೇಲೆ ಆಕ್ರಮಣ ನಡೆಸಿದ್ದಾರೆ. ವ್ಯಾಪಕವಾಗಿ ಕಲ್ಲುತೂರಾಟ ನಡೆಸಲಾಗಿದ್ದು ಕಲ್ಲುತೂರಾಟದಲ್ಲಿ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ.
ಪೆಟ್ರೋಲ್ ಬಾಂಬ್ ಎಸೆತ: ದೊಂಬಿನಿರತರು ಮೊಬೈಲ್ ಫೋನ್ ಅಂಗಡಿಯ ಬಾಗಿಲು ಮುರಿದು ಒಳನುಗ್ಗಿ ಲೂಟಿಮಾಡಿರುವ ದೃಶ್ಯಾವಳಿಗಳು ಸಿಸಿಟಿವಿ ಫೂಟೇಜ್‌ನಲ್ಲಿ ದಾಖಲಾಗಿದ್ದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. ದೊಂಬಿಯಲ್ಲಿ ತೊಡಗಿದ್ದವರು ಮನಸೋ ಇಚ್ಛೆ ಲೂಟಿ ಮಾಡಿ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿದ್ದಾಗ ಪೊಲೀಸರು ಮೂಕಪ್ರೇಕ್ಷರಂತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದೊಂಬಿ ಮತ್ತು ಲೂಟಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 270 ಮಂದಿಯನ್ನು ಬಂಧಿಸಿದ್ದು ತನಿಖೆ ಆರಂಭಿಸಿದ್ದಾರೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು 1500 ಪೊಲೀಸರನ್ನು ನಿಯೋಜಿಸಲಾಗಿದ್ದರೂ ದೊಂಬಿ ನಿಯಂತ್ರಿಸಲು ಪೊಲೀಸ್ ಇಲಾಖೆ ವಿಫಲವಾಗಿರುವ ಬಗ್ಗೆ ಹಲವಾರು ರಾಜಕೀಯ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.







