ಬೈಕ್ ಸ್ಟಂಟ್ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹಾಕಿದವನಿಗೆ ಸಿಕ್ಕಿತು ' ವಿಶೇಷ ಬಹುಮಾನ'
ಬೆಂಗಳೂರು, ಸೆ. 25 : ನಿಮ್ಮ ಕಾರು, ಬೈಕುಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ಅದರ ಚಿತ್ರಗಳನ್ನು ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಗಳಲ್ಲಿ ಹಾಕಿ ಮಿಂಚುವ 'ಕೂಲ್' ಅಭ್ಯಾಸ ನಿಮಗೆ ಅಥವಾ ನಿಮ್ಮ ಸ್ನೇಹಿತರಿಗಿದೆಯೇ ? ಹಾಗಾದರೆ ಇದನ್ನೊಮ್ಮೆ ಓದಿ.
ಬೆಂಗಳೂರಿನ ಕೋಲ್ಸ್ ಪಾರ್ಕ್ ನಿವಾಸಿ ಮೊಹಮ್ಮದ್ ಝುಬೇರ್ ಸ್ಕೂಟರ್ ಒಂದರಲ್ಲಿ ಸ್ಟಂಟ್ (ವೀಲಿ) ಮಾಡಿ ಅದರ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಾಕಿ ಮಿಂಚಿದ್ದರು. ಆದರೆ ಅವರ ಈ ' ಕೂಲ್ ' ಸ್ಟಂಟ್ ಅವರನ್ನು ನೇರವಾಗಿ ಜೈಲಿಗೆ ತಲುಪಿಸಿಬಿಟ್ಟಿದೆ. ಅದೂ ಬಕ್ರೀದ್ ಹಬ್ಬದ ದಿನವೇ !
ಫೇಸ್ ಬುಕ್ ನಲ್ಲಿ ಝುಬೇರ್ ರ ದುಸ್ಸಾಹಸದ ಚಿತ್ರಗಳನ್ನು ನೋಡಿದ ಪೊಲೀಸರು ಅವರ ಬೆನ್ನು ಬಿದ್ದು ಕಂಡು ಹಿಡಿದು ಬಂಧಿಸಿದ್ದಾರೆ. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಅವರ ಸುಜುಕಿ ಅಕ್ಸೆಸ್ ಸ್ಕೂಟನ್ ಅನ್ನು ವಶಕ್ಕೆ ಪಡೆಯಲಾಗಿದೆ.
ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ತಮ್ಮ ಹಾಗು ಇತರರ ಜೀವಕ್ಕೆ ಸಂಚಕಾರ ತರುವವರಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಈಗ ಇಂತಹ ಸ್ಟಂಟ್ ಹವ್ಯಾಸಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗೆ ಯಾರಾದರೂ ಮಾಡುವುದನ್ನು ನೋಡಿದರೆ ಸಾರ್ವಜನಿಕರು 100 ಕ್ಕೆ ಡಯಲ್ ಮಾಡಿ ಅಥವಾ ಟ್ವಿಟ್ಟರ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಲು ಕೋರಲಾಗಿದೆ.