ಸಿಬಿಐಯಿಂದ ಮುಂಬೈ ಸ್ಫೋಟ ಆರೋಪಿಯ ಹತ್ಯಾ ಪ್ರಕರಣ ತನಿಖೆ: ಛೋಟಾ ರಾಜನ್ ವಿರುದ್ಧ ಮೊಕದ್ದಮೆ

ಹೊಸದಿಲ್ಲಿ, ಸೆ.25: ನಟ ಸಂಜತ್ ದತ್‌ರಿಗೆ ಎಕೆ-56 ರೈಫಲೊಂದನ್ನು ನೀಡಿದ್ದ 1993ರ ಮುಂಬೈ ಸ್ಫೋಟದ ಆರೋಪಿ, ಹನೀಫ್ ಕಡಾವಾಲಾ ಎಂಬಾತನ ಹತ್ಯೆಯ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ಈ ಸಂಬಂಧ ಅದು ಗ್ಯಾಗ್‌ಸ್ಟರ್ ಛೋಟಾ ರಾಜನ್ ಮತ್ತಾತನ ಸಹಚರರ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿಕೊಂಡಿದೆ.
ಕಡಾವಾಲಾ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ವಿಷಯವನ್ನು ಸಿಬಿಐ ವಕ್ತಾರ ಆರ್.ಕೆ.ಗೌರ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಸರಕಾರದ ಶಿಫಾರಸಿನ ಬಳಿಕ ಅದು ತನಿಖೆಯನ್ನು ವಹಿಸಿಕೊಂಡಿದೆ. ನಿಯಮದಂತೆ ಸಿಬಿಐ ರಾಜ್ಯ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಿಂದ ತನ್ನ ತನಿಖೆಯನ್ನು ಆರಂಭಿಸುತ್ತದೆ ಎಂದು ಮೂಲಗಳು ಹೇಳಿವೆ.
ಛೋಟಾ ರಾಜನ್, ಆತನ ಗ್ಯಾಂಗ್ ಸದಸ್ಯರಾದ ಗುರು ಸಾಟಂ ಮತ್ತಿತರರ ವಿರುದ್ಧ ಐಪಿಸಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೂಕ್ತ ಪರಿಚ್ಛೇದಗಳನ್ವಯ ಕಡಾವಾಲಾ ಹತ್ಯೆಯ ಸಂಬಂಧ ಪ್ರಕರಣ ದಾಖಲಿಸಲಾಗಿದೆಯೆಂದು ಅವು ತಿಳಿಸಿವೆ.
ಟೈಗರ್ ಮೆಮನ್‌ನ ಸೂಚನೆಯಂತೆ ಕಡಾವಾಲಾ ಮುಂಬೈಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಿದ್ದನು. ಅವು 1993ರ ಮುಂಬೈ ಸ್ಫೋಟಕ್ಕೆ ಉಪಯೋಗಿಸಲ್ಪಟ್ಟಿದ್ದವು. 2001ರ ಫೆ.7ರಂದು ಮೂವರು ವ್ಯಕ್ತಿಗಳು ಕಡಾವಾಲಾನನ್ನು ಆತನ ಕಚೇರಿಯಲ್ಲೇ ಹತ್ಯೆ ಮಾಡಿದ್ದರು.







