ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕಾಗಿದೆ : ಡಾ.ಸರ್ಫರಾಝ್ ಚಂದ್ರಗುತ್ತಿ
‘ಮುಸ್ಲಿಂ ಮಹಿಳೆಯರು ಮತ್ತು ತಲಾಖ್’ ಅನುವಾದಿತ ಕೃತಿ ಬಿಡುಗಡೆ

ಮಂಗಳೂರು, ಸೆ.20:ದೇಶದಲ್ಲಿ ಸಾಚಾರ್ ವರದಿ ಮುಸ್ಲಿಂ ಸಮುದಾಯದ ಸ್ಥಿತಿಗತಿಗಳ ವಾಸ್ತವ ಚಿತ್ರಣವನ್ನು ತೆರೆದಿಟ್ಟಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣ ಮುಂದುವರಿಸಲು, ಅವರಿಗೂ ಸಮಾನತೆಯ ಅವಕಾಶ ನೀಡಲು ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ಲೇಖಕ ಡಾ.ಸರ್ಫರಾಝ್ ಚಂದ್ರಗುತ್ತಿ ತಿಳಿಸಿದರು.
ಅವರು ಇಂದು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ವತಿಯಿಂದ ಸಾಹಿತ್ಯ ಸದನದಲ್ಲಿ ಸೈಯದ್ ಮೆಹಬೂಬ್ ಶಾ ಖಾದ್ರಿಯವರ ಮೂಲ ಮರಾಠಿ ಕೃತಿ, ಅಂಜಲಿ ಪಟವರ್ಧನ್ ಅವರ ಮೂಲಕ ಆಂಗ್ಲಭಾಷೆಗೆ ಅನುವಾದಿಸಲ್ಪಟ್ಟ, ನಾಡೋಜಸಾರಾ ಅಬೂಬಕ್ಕರ್ ಕನ್ನಡಕ್ಕೆ ಅನುವಾದಿಸಿದ ‘ಮುಸ್ಲಿಂ ಮಹಿಳೆಯರು ಮತ್ತು ತಲಾಖ್’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರವಾದಿಯವರು ಮಹಿಳೆಯರನ್ನು ಗೌರವ ಭಾವನೆಯೊಂದಿಗೆ ಕಾಣಬೇಕೆಂಬ ಸಂದೇಶ ನೀಡಿದ್ದರು. ಪವಿತ್ರ ಕುರ್‌ಅನ್ ಹೆಣ್ಣು ಮತ್ತು ಗಂಡಿನ ನಡುವೆ ಸಮಾನತೆಯ ವಿಚಾರಗಳನ್ನು ಪ್ರತಿಪಾದಿಸುತ್ತದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ಅವರಿಗೆ ಆಸ್ತಿಯ ಹಕ್ಕು ನೀಡಬೇಕು. ವಿಚ್ಛೇದನ, ಮರು ವಿವಾಹದ ಅವಕಾಶವನ್ನೂ ನೀಡಿದೆ. ಪುರುಷ ಪ್ರಧಾನ ಸಮಾಜದಲ್ಲಿ ಕಾಲಕ್ರಮೇಣ ಬದಲಾವಣೆಗಳು ಘಟಿಸಿದಂತೆ ತಲಾಖ್ ಪದವನ್ನು ತಪ್ಪಾಗಿ ಅಥೈಸಿಕೊಂಡು, ದುರ್ಬಳಕೆ ಮಾಡಲಾದ ಪ್ರಕರಣಗಳು ನಡೆದಿವೆ. ಇದರಿಂದ ಸಾಕಷ್ಟು ಮಹಿಳೆಯರು ಬದುಕಿನಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದರು.
ಸಂವಿಧಾನದತ್ತವಾದ ಹಕ್ಕುಗಳು ಎಲ್ಲರಿಗೂ ಲಭಿಸುವಂತಾಗಬೇಕು
ಸಂವಿಧಾನದತ್ತವಾದ ಹಕ್ಕುಗಳು ದೇಶದ ಎಲ್ಲಾ ಪ್ರಜೆಗಳಿಗೂ ಲಭಿಸುವಂತಾಗಬೇಕು. ಈ ನಿಟ್ಟಿನಲ್ಲಿ ತಾರತಮ್ಯ ಸಲ್ಲದು ಎಂದು ನಾಡೋಜ ಡಾ.ಸಾರಾ ಅಬೂಬಕ್ಕರ್ ತಿಳಿಸಿದರು. ತಲಾಖ್‌ಗೆ ಸಂಬಂಧಿಸಿದಂತೆ ಸೈಯದ್ ಮೆಹಬೂಬ್‌ರವರು ತಮ್ಮ ಸಹೋದರಿಗೆ ಆಗಿರುವ ಸಂಕಷ್ಟವನ್ನು ಆಧಾರವಾಗಿಟ್ಟುಕೊಂಡು ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ತಲಾಖ್ ಮೂಲಕ ವಿಚ್ಛೇದನಗೊಂಡ ಮಹಿಳೆಯ ಬದುಕಿನ ಚಿತ್ರಣವಿದೆ. ಮೂಲ ಕೃತಿ ಸೈಯದ್ ಮೆಹಬೂಬ್ ಶಾ ಖಾದ್ರಿ ಅವರ ಮರಾಠಿ ಕೃತಿಯಾಗಿದೆ. ಅಂಜಲಿ ಪಟವರ್ಧನ್ ಈ ಕೃತಿಯನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದು, ಈ ಕೃತಿಯನ್ನು ‘ಮುಸ್ಲಿಂ ಮಹಿಳೆಯರು ಮತ್ತು ತಲಾಖ್’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾಗಿ ಸಾರಾ ಅಬೂಬಕ್ಕರ್ ತಿಳಿಸಿದರು.
ಸಾಹಿತಿ ಮುಮ್ತಾಜ್ ಬೇಗಂ ಕೃತಿಯನ್ನು ಪರಿಚಯ ಮಾಡುತ್ತಾ, ಸಮುದಾಯದ ಜನರ ಶಿಕ್ಷಣ ನಿರುದ್ಯೋಗದ ಸಮಸ್ಯೆಯ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಸೈಯದ್ ಮೆಹಬೂಬ್‌ರ ಹೋರಾಟದ ವಿವರಗಳನ್ನು ಈ ಕೃತಿ ಒಳಗೊಂಡಿದೆ. ಅವರು ತಮ್ಮ ಮನೆಯಿಂಲೇ ಆರಂಭಿಸಿದ ಹೋರಾಟದ ಚಿತ್ರಣ ಈ ಕೃತಿಯಲ್ಲಿ ಮೂಡಿ ಬಂದಿದೆ ಎಂದು ಮುಮ್ತಾಝ್ ತಿಳಿಸಿದರು.
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಶೈಲಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.







