ಛಾಯಾಚಿತ್ರಗಾರರು ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಿ: ಉಷಾ
ಸನ್ಮಾನ , ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
.jpg)
ಸಾಗರ, ಸೆ.25: ಸವಾಲುಗಳ ನಡುವೆ ಕೆಲಸ ಮಾಡುವ ಛಾಯಾಚಿತ್ರಗಾರರು ವೃತ್ತಿಯ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡು ಸಮಾಜಕ್ಕೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಗರಸಭಾಧ್ಯಕ್ಷೆ ಎನ್.ಉಷಾ ತಿಳಿಸಿದರು.
ಇಲ್ಲಿನ ಸರಕಾರಿ ನೌಕರರ ಭವನದಲ್ಲಿ ರವಿವಾರ ತಾಲೂಕು ಫೋಟೊ ಮತ್ತು ವೀಡಿಯೊ ಗ್ರಾಫರ್ಸ್ ಅಸೋಶಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಏಕಾಗ್ರತೆ ಹಾಗೂ ತಾಳ್ಮೆ ಛಾಯಾಚಿತ್ರಗಾರರ ಆಭರಣ. ಇವೆರಡನ್ನು ಯಾರು ಕರಗತ ಮಾಡಿಕೊಂಡಿರುತ್ತಾರೋ ಅಂತಹವರಿಗೆ ಉತ್ತಮ ಛಾಯಾಚಿತ್ರವನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಆಧುನಿಕ ದಿನಮಾನಗಳಲ್ಲಿ ಅನೇಕ ತಂತ್ರಜ್ಞ್ಞಾನಗಳು ಛಾಯಾಚಿತ್ರ ಕ್ಷೇತ್ರವನ್ನು ಪ್ರವೇಶಿಸಿದೆ. ಇದರಿಂದ ಹೊಸಹೊಸ ಛಾಯಾಚಿತ್ರಗಾರರು ಸಹ ಹುಟ್ಟಿಕೊಳ್ಳುತ್ತಿದ್ದಾರೆ. ಅವರು ಸಹ ಹಿರಿಯ ಛಾಯಾಚಿತ್ರಗಾರರ ಮಾರ್ಗದರ್ಶನದಲ್ಲಿ ವೃತ್ತಿ ಆರಂಭಿಸುವಂತಾಗಬೇಕು ಎಂದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ ಮಾತನಾಡಿ, ಛಾಯಾಚಿತ್ರ ಹಾಗೂ ವೀಡಿಯೊ ಗ್ರಾಫರ್‌ಗಳ ಮೇಲೆ ಸಾಮಾಜಿಕ ಜವಾಬ್ದಾರಿ ಸಹ ಇರುತ್ತದೆ. ಛಾಯಾಚಿತ್ರ ಹಾಗೂ ವೀಡಿಯೊ ದೃಶ್ಯಗಳನ್ನು ಸೆರೆ ಹಿಡಿಯುವಾಗ ಮಾನವೀಯ ಮೌಲ್ಯಗಳನ್ನು ಗಮನದಲ್ಲಿ ಇರಿಸಿಕೊಳ್ಳುವ ಜೊತೆಗೆ ಸಮಾಜಮುಖಿ ಚಿಂತನೆಯನ್ನು ವೃತ್ತಿಯೊಂದಿಗೆ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ ಮಾತನಾಡಿ, ಬದಲಾದ ದಿನಮಾನಗಳಲ್ಲಿ ಛಾಯಾಚಿತ್ರಗಾರರ ಕೆಲಸವನ್ನು ಕೆಲವು ಸರಕಾರಿ ಕಚೇರಿಗಳಲ್ಲಿ ನೌಕರರು ಕ್ಯಾಮರಾ ಇರಿಸಿಕೊಂಡು ಲಾಭದಾಸೆಗಾಗಿ ಮಾಡುತ್ತಿದ್ದಾರೆ. ಇದರಿಂದ ವೃತ್ತಿಯನ್ನು ನಂಬಿಕೊಂಡು ಬದುಕುವ ಛಾಯಾಚಿತ್ರಗಾರರು ನಷ್ಟ ಅನುಭವಿಸುವಂತಾಗಿದೆ. ಗ್ರಾಪಂ, ಸರಕಾರಿ ಕಚೇರಿಗಳಲ್ಲಿ ಅಲ್ಲಿನ ನೌಕರರೇ ವೈಯಕ್ತಿಕ ಫೋಟೊಗ್ರಾಫಿ ಮಾಡುವುದು ಸರಿಯಲ್ಲ. ಈ ಬಗ್ಗೆ ನಮ್ಮ ಸಂಘದ ವತಿಯಿಂದ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯ ಛಾಯಾಚಿತ್ರಗಾರ ಆರ್.ಗಜಾನನ, ಲೇಖಕ ಜಿ.ನಾಗೇಶ್ ಹಾಗೂ ಸಮಾಜ ಸೇವಕ ಸಂಪತ್‌ಕುಮಾರ್‌ರನ್ನು ಸನ್ಮಾನಿಸಲಾಯಿತು. ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸ್ನೇಹಾ ಎ.ಎಚ್. ಅಂಬಾರಗೋಡ್ಲು, ಸಮರ್ಥಾ ಕೆ. ಸಾಗರ ಇವರನ್ನು ಪುರಸ್ಕರಿಸಲಾಯಿತು. ಸಂಘದ ಅಧ್ಯಕ್ಷ ಸತೀಶ್ ಆರ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸೊರಬ ತಾಲೂಕು ಫೋಟೊ ಗ್ರಾಫರ್ಸ್ ಸಂಘದ ಅಧ್ಯಕ್ಷ ಲೋಕೇಶ್, ಕಾನೂನು ಸಲಹೆಗಾರ ಎಂ.ರಾಘವೇಂದ್ರ ಉಪಸ್ಥಿತರಿದ್ದರು.





