ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಕೊಡವ ಕೇರಿಗಳ ಕರೆ
ಕೈಲ್ ಪೊಳ್ದ್ ಸಂತೋಷ ಕೂಟ

ಮಡಿಕೇರಿ, ಸೆ.25: ಒಗ್ಗಟ್ಟು ಮೂಡಿಸಲು ಮತ್ತು ಸಮಾಜದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ನಗರದಲ್ಲಿ ವಿವಿಧ ಕೊಡವ ಕೇರಿ ಸಂಘಗಳನ್ನು ರಚಿಸಲಾಗಿದ್ದು, ಮೂಲಭೂತ ಸಮಸ್ಯೆಗಳು ಎದುರಾದಾಗ ಧ್ವನಿ ಎತ್ತುವ ಕೆಲಸವನ್ನು ಕೂಡ ಸಂಘಗಳು ಮಾಡಬೇಕೆಂದು ದೇಚೂರು ಕೊಡವ ಕೇರಿಯ ಪ್ರಮುಖರು ಕರೆ ನೀಡಿದ್ದಾರೆ.
ದೇಚೂರು ಕೊಡವ ಕೇರಿ ಸಂಘದ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ ಕೈಲ್ ಪೊಳ್ದ್ ಸಂತೋಷ ಕೂಟದಲ್ಲಿ ಕೇರಿಯ ಉಪಾಧ್ಯಕ್ಷ ಮಾದೆಯಂಡ ರವಿ ಕುಂಞಪ್ಪ ಮಾತನಾಡಿದರು. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿದೀಪ, ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಕಾರ್ಯವನ್ನು ಕೇರಿಗಳು ಮಾಡಬೇಕೆಂದರು. ಕೈಲ್ ಪೊ ್ದ್, ಹುತ್ತರಿಯಂತಹ ಕಾರ್ಯಕ್ರಮಗಳಲ್ಲಿ ಒಂದೆಡೆ ಸೇರಿದಾಗ ಪರಸ್ಪರ ಕಾರ್ಯ ಚಟುವಟಿಕೆಗಳು ವಿನಿಮಯವಾಗುತ್ತದೆ. ಆದ್ದರಿಂದ ಯುವ ಪೀಳಿಗೆ ಹೆಚ್ಚಾಗಿ ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ರವಿ ಕುಂಞಪ್ಪಕರೆ ನೀಡಿದರು.
ಇದೇ ಸಂದರ್ಭ ದೇಚೂರು ಕೊಡವ ಕೇರಿಯಿಂದ ಮಡಿಕೇರಿ ಕೊಡವ ಸಮಾಜದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಮೂವರು ಸದಸ್ಯರಾದ ತಾಪಂಡ ಸರೋಜಾ ತಮ್ಮಯ್ಯ, ಮಾದೇಟ್ಟಿರ ಬೆಳ್ಯಪ್ಪ ಹಾಗೂ ಸಾವಿತ್ರಿ ಅವರನ್ನು ಅಭಿನಂದಿಸಲಾಯಿತು.
ಕೈಲ್ ಪೊಳ್ದ್ ಪ್ರಯುಕ್ತ ಪುರುಷರಿಗೆ ಹಾಗೂ ಮಹಿಳೆಯರಿಗಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮತ್ತು ಕಲ್ಲು ಹೊಡೆಯುವ ಸ್ಪರ್ಧೆ, ರನ್ನಿಂಗ್ ರೇಸ್, ಮಕ್ಕಳಿಗೆ ಕಪ್ಪೆ ಜಿಗಿತ, ಬ್ಯಾಲೆನ್ಸಿಂಗ್ ಬುಕ್, ಚಮಚ ಓಟ, ಪಾಯಿಸನ್ ಕಾರ್ಪೆಟ್ ಇತ್ಯಾದಿ ಸ್ಪರ್ಧೆಗಳು ನಡೆದವು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೂಪದಿರ ಮಿಟ್ಟು ಮಾಚಯ್ಯ ವಹಿಸಿದ್ದರು. ಕೇರಿಯ ಗೌರವಾಧ್ಯಕ್ಷ ಕೋದಂಡ ಡಾ. ಎಂ.ದೇವಯ್ಯ, ಸೋಮಯ್ಯ, ಕಂಬಿರಂಡ ಬೋಜಿ ಸೋಮಯ್ಯ, ಮಂಡೀರ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.







