ಪಠ್ಯೇತರ ವಿಷಯಗಳಲ್ಲಿ ಆಸಕ್ತಿವಹಿಸಿ: ಶಾಸಕ ಸೈಲ್
ವಿದ್ಯಾರ್ಥಿ ಸಂಘದ ಚಟುವಟಿಕೆ

ಕಾರವಾರ, ಸೆ.25: ಪಠ್ಯಕ್ರಮದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳು ಅತ್ಯಂತ ಮಹತ್ತರ ಪಾತ್ರವನ್ನು ವಹಿಸುತ್ತದೆ. ಆದ ಕಾರಣ ವಿದ್ಯಾರ್ಥಿನಿಯರು ಕಾಲೇಜಿನ ಚಟುವಟಿಕೆಗಳಲ್ಲಿ ಭಾಗವಹಿಸಿ ಯಶಸ್ಸನ್ನು ಕಂಡುಕೊಳ್ಳಬೇಕು ಎಂದು ಕಾರವಾರ-ಅಂಕೋಲಾ ಶಾಸಕ ಸತೀಶ ಸೈಲ್ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದರೆ ತಂದೆ-ತಾಯಿ ಜೊತೆಗೆ, ಕಾಲೇಜಿಗೆ ಕೀರ್ತಿ ಸಲ್ಲುತ್ತದೆ. ಮಹಿಳಾ ಕಾಲೇಜಿಗೆ ಈಗಾಗಲೇ ಖಾಲಿ ನಿವೇಶನವನ್ನು ಗುರುತಿಸಿದ್ದು, ಸದ್ಯದಲ್ಲೇ ಅದನ್ನು ಪಡೆದುಕೊಂಡು ಕಾಮಗಾರಿ ಪ್ರಾರಂಭಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು. ಅ
ತಿಥಿಯಾಗಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ ರಾಹುಲ ಬೋರಕರ ಮಾತನಾಡಿ, ಯುವಶಕ್ತಿ ಹೇಗೆ ಮುಂದೆ ಬರಬೇಕೆಂಬ ತಮ್ಮ ಅನುಭವವನ್ನು ಹಾಗೂ ಅಭಿಪ್ರಾಯವನ್ನು ಹಂಚಿಕೊಂಡರು. ಪ್ರಾಂಶುಪಾಲ ಪ್ರೊ. ವಿ.ಪಿ. ಗಂಗೊಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ವಿಶ್ವನಾಥ ಎಂ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ನಗರಸಭೆ ಸದಸ್ಯ ಪ್ರೇಮಾನಂದ ಗುನಗಾ, ಶಂಕರ ಚಾಪೊಲೇಕರ, ಸಾಂಸ್ಕೃತಿಕ ಸಂಘದ ಕಾರ್ಯಾಧ್ಯಕ್ಷೆ ಪ್ರೊ. ಭುವನೇಶ್ವರಿ ನಾಯ್ಕ, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕರೀಷ್ಮಾ ಪವಾರ ವೇದಿಕೆಯಲ್ಲಿದ್ದರು. ಪ್ರೊ. ಗಾಯತ್ರಿ ಆಳ್ವ ಹಾಗೂ ಪ್ರೊ. ಎಂ.ಎಸ್. ಸುಬ್ಬಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.







