ಮಣಿಕಂಠ ನಾಯ್ಕ ಸ್ಮಾರಕ ಪ್ರತಿಷ್ಠಾನದಿಂದ ಪಠ್ಯ ವಿತರಣೆ

ಅಂಕೋಲಾ, ಸೆ.25: ಶ್ರಮ ಸಂಸ್ಕೃತಿಯನ್ನು ಹೊಂದಿರುವ ವ್ಯಕ್ತಿ ನಿಧನದ ನಂತರವೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಅಂತಹವರ ಸಾಲಿನಲ್ಲಿ ತೀರಾ ಬಡತನದಲ್ಲಿಯೇ ಹುಟ್ಟಿ ತನ್ನದೇ ಆದ ಸ್ವಂತ ಉದ್ಯಮದ ಮೂಲಕ ಎಲ್ಲರಿಗೂ ಬೇಕಾಗಿದ್ದ ಮಣಿಕಂಠ ನಾಯ್ಕ ಗುರುತಿಸಿಕೊಳ್ಳುತ್ತಾರೆ ಎಂದು ಗೋಕರ್ಣ ಪಿಎಸ್ಸೈ ಗೋವಿಂದ ಎಂ.ಬಿ. ಅಭಿಪ್ರಾಯಪಟ್ಟರು.
ಮಣಿಕಂಠ ನಾಯ್ಕ ಸ್ಮಾರಕ ಪ್ರತಿಷ್ಠಾನದವರು ತದಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ-ಇಂಗ್ಲಿಷ್ ವ್ಯಾಕರಣ ಮತ್ತು ಪಠ್ಯ ವಿತರಿಸಿ ಅವರು ಮಾತನಾಡಿದರು.
ನಿವೃತ್ತ ಶಿಕ್ಷಕ ಅರವಿಂದ ನಾಯ್ಕ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಯಾನಂದ ಜಿ. ನಾಯ್ಕ, ಶಾಲಾ ಮುಖ್ಯಾಧ್ಯಾಪಕಿ ಭವಾನಿ ಎಸ್. ಬಾಡಕರ, ದೈಹಿಕ ಶಿಕ್ಷಕಿ ಕಲ್ಪನಾ ಶೆಟ್ಟಿ ಮಣಿಕಂಠ ನಾಯ್ಕನ ಕುರಿತಾಗಿ ಮಾತನಾಡಿದರು. ಮಣಿಕಂಠ ನಾಯ್ಕ ಕುಟುಂಬಸ್ಥರಾದ ದಿವಾಕರ ನಾಯ್ಕ, ಸದಾನಂದ ನಾಯ್ಕ, ಆನಂದಿ ನಾಯ್ಕ, ನಾಗವೇಣಿ ನಾಯ್ಕ, ಸುಬ್ರಹ್ಮಣ್ಯ ನಾಯ್ಕ, ಶಾಂತೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಮಂಜಗುಣಿ ಸ್ವಾಗತಿಸಿ, ಖಜಾಂಚಿ ಹಾಗೂ ನ್ಯಾಯವಾದಿ ಮಮತಾ ನಾಯ್ಕ ನಿರೂಪಿಸಿದರು.







