ಮನಸ್ಥಿತಿ ಸರಿಯಾದರೆ ಸಮಾಜ ಸುಸ್ಥಿತಿಗೆ: ಸಾಹಿತಿ ಕಲ್ಕಟ್ಟೆ
ಕರ್ನಾಟಕ ರಾಜ್ಯ ಏಕತಾ ವೇದಿಕೆ

ಚಿಕ್ಕಮಗಳೂರು, ಸೆ.25: ನಮ್ಮಲ್ಲಿರುವ ಮನಸ್ಥಿತಿ ಸರಿಯಾದರೆ ಈ ಸಮಾಜದ ಪರಿಸ್ಥಿತಿ ಸರಿಯಾಗುತ್ತದೆ. ಹಾಗಾಗಿ ಈ ನೆಲದ ನಮ್ಮ ಸಂಸ್ಕೃತಿ ದೊಡ್ಡದೆನ್ನುವ ಮನೋಭಾವದ ಸಂಸ್ಕಾರ ಎಲ್ಲರಲ್ಲೂ ಬೆಳೆಯಬೇಕು ಎಂದು ಸಾಹಿತಿ ಕಲ್ಕಟ್ಟೆ ನಾಗರಾಜರಾವ್ ಹೇಳಿದರು.
ಅವರು ರವಿವಾರ ನಗರದ ಸಹಾರಾ ಶಾದಿ ಮಹಲ್‌ನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ಏಕತಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ. ಬಹಳ ಪರಿವರ್ತನೆಯೂ ಆಗಬೇಕಾಗಿರುವ ಜೊತೆ ಹೆಜ್ಜೆ ಇಡಬೇಕಿದೆ. ಅಂತಹ ಬದಲಾವಣೆಗಳು ನನ್ನಿಂದಲೇ ಶುರುವಾಗಬೇಕೆಂಬ ಮನೋಭಾವನೆ ಎಲ್ಲರಲ್ಲೂ ಮೈಗೂಡಬೇಕೆಂದು ಹೇಳಿದರು.
ಏಕತಾ ವೇದಿಕೆಗೆ ಹಿರಿಯರ ಸಲಹೆ ಸಹಕಾರ ದೊರೆತರೆ ಯುವ ಸಮೂಹದ ಹುಮ್ಮಸ್ಸಿಗೆ ಹೊಸ ಕಳೆ ಬರುತ್ತದೆ. ಆಗ ವೇದಿಕೆಗೂ ಅರ್ಥ ಬರುತ್ತದೆ ಎಂದರು.
ಪ್ರತಿಯೊಬ್ಬರಲ್ಲೂ ಭಾಷಾ ಪ್ರೇಮ ಹೆಚ್ಚಾಗಿ ನಾಡು, ನುಡಿ, ಸಂಸ್ಕೃತಿ ಎಲ್ಲೆಡೆ ಪಸರಿಸಲಿ. ಕನ್ನಡಿಗರ ಒಗ್ಗಟ್ಟಿನ ಶಕ್ತಿಗೆ ಮತ್ತಷ್ಟು ಹೆಚ್ಚಿನ ಬಲ ತುಂಬಲು ಈ ವೇದಿಕೆ ಸಹಕಾರಿಯಾಗಲಿ ಎಂದು ಆಶಿಸಿದರು.
ರಾಜ್ಯ ಏಕತಾ ವೇದಿಕೆ ಅಧ್ಯಕ್ಷ ಅಫ್ಜಲ್ ಪಾಷಾ ಮಾತನಾಡಿ, ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಸರ್ವಧರ್ಮಗಳು ಸಮನ್ವಯವಾಗಿರುವ ರಾಷ್ಟ್ರದಲ್ಲಿ ಇಂದು ಜಾತಿಯಾಧಾರಿತ ವ್ಯವಸ್ಥೆಯಿಂದಾಗಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ಮಿನಿ ವಿಧಾನಸೌಧದಿಂದ ನಗರದಲ್ಲಿ ನಡೆದ ಬೈಕ್ ಜಾಥಾಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ರಸೂಲ್‌ಖಾನ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರೂಬಿನ್ ಮೋಸಸ್, ಎಚ್.ಎಸ್. ಪುಟ್ಟಸ್ವಾಮಿ, ಸುರೇಖಾ ಸಂಪತ್ ರಾಜ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಸಿಪಿಐ ಮುಖಂಡ ಬಿ. ಅಮ್ಜದ್, ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ಸಿ.ಎನ್. ಅಕ್ಮಲ್, ಡಾ.ಎಂ.ಜಿ. ಹೆಲ್ದೋ, ಕನ್ನಡಪರ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ, ಕೆ.ಆರ್. ಅನಿಲ್‌ಕುಮಾರ್, ಜೆನ್ನಿಕ್ಲಾಸ್ ಡೇವಿಡ್, ಬಿ.ಎಲ್. ಪ್ರವೀಣ್, ಜಗದೀಶ್ ಅರಸ್, ಜಂಶಿದ್‌ಖಾನ್, ಅಲ್ತಾಫ್ ಬಿಳಗುಳ ಕಾನೂನು ಸಲಹೆಗಾರ ಶಿವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







