ಆಹಾರಕ್ರಮದ ಮೇಲೆ ನಿರಂತರ ದಬ್ಬಾಳಿಕೆ: ಭಾಸ್ಕರ್ ಪ್ರಸಾದ್
‘ಚಲೋ ಉಡುಪಿ’ ಜಾಥಾ ಕರಪತ್ರ ಬಿಡುಗಡೆ

ಉಡುಪಿ, ಸೆ.25: ‘ದನದಲ್ಲಿ ಕೋಟಿ ದೇವರುಗಳಿದ್ದಾರೆ’ ಎಂದು ಸುಳ್ಳು ಹೇಳಿ ಸ್ವ-ಹಿತಾಸಕ್ತಿಗಾಗಿ ಜನರ ಆಹಾರದ ಕ್ರಮದ ಮೇಲೆ ನಿರಂತರ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದು ಈಗ ಜನರನ್ನು ಕೊಲೆ ಮಾಡುವಷ್ಟು ಮುಂದುವರಿದಿದೆ. ಮನುಷ್ಯನ ಪ್ರಾಣಕ್ಕಿಂತ ದನದ ಜೀವ ಮುಖ್ಯ ಎಂಬ ಕ್ರೂರಮಟ್ಟಕ್ಕೆ ತಲುಪಿದೆ. ಆದ್ದರಿಂದ ನಾವು ಆಹಾರದ ಆಯ್ಕೆಯ ಹಕ್ಕನ್ನು ಉಳಿಸಬೇಕಾಗಿದೆ ಎಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಸಂಚಾಲಕ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.
ಸಮಿತಿಯ ನೇತೃತ್ವದಲ್ಲಿ ಅ.4ರಿಂದ 9ರವರೆಗೆ ನಡೆಯಲಿರುವ ಸ್ವಾಭಿಮಾನಿ ಸಂಘರ್ಷ ಜಾಥಾ ಚಲೋ 'ಉಡುಪಿ-ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು' ಇದರ ಕರಪತ್ರವನ್ನು ರವಿವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಆಹಾರದ ಆಯ್ಕೆ ಮತ್ತು ಭೂಮಿಯ ಹಕ್ಕಿಗಾಗಿ ಹಮ್ಮಿಕೊಂಡಿರುವ ಚಲೋ ಉಡುಪಿ ಚಳವಳಿಯು ಕರ್ನಾಟಕದ ಇತಿಹಾಸದ ಪುಟದಲ್ಲಿ ದಾಖಲಾಗುವ ರೀತಿಯಲ್ಲಿ ರೂಪುಗೊಳ್ಳುತ್ತಿದೆ. ಈ ಹೋರಾಟದಲ್ಲಿ ರಾಜ್ಯದ 200ಕ್ಕೂ ಅಧಿಕ ಪ್ರಗತಿಪರ ಸಂಘಟನೆಗಳು ಕೈಜೋಡಿಸಿವೆ ಎಂದು ಅವರು ತಿಳಿಸಿದರು.
ಅ.4ರಂದು ಬೆಂಗಳೂರಿನಿಂದ ಆರಂಭಗೊಳ್ಳುವ ಈ ಜಾಥಾವು ಅ.9ಕ್ಕೆ ಉಡುಪಿಯಲ್ಲಿ ಸಮಾಪನಗೊಳ್ಳಲಾಗಿದೆ. ಅಂದು ಉಡುಪಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬೀಡಿನಗುಡ್ಡೆಯ ಮಹಾತ್ಮಗಾಂಧಿ ಬಯಲು ರಂಗಮಂದಿರದಲ್ಲಿ ಮಹಾ ಸಮಾವೇಶವನ್ನು ನಡೆಸಲಾಗುವುದು. ಊನಾದಲ್ಲಿ ದಲಿತರ ಬಹೃತ್ ಸಮಾವೇಶದ ಮುಂದಾಳತ್ವ ವಹಿಸಿದ್ದ ಯುವ ನಾಯಕ ಜಿಗ್ನೇಶ್ ಮೇವಾನಿ ಆಗಮಿಸಲಿದ್ದು, 20ರಿಂದ 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಈ ಚಳವಳಿಯು ಒಟ್ಟು ಮೂರು ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಚಲೋ ಉಡುಪಿ. ಎರಡನೆ ಹಂತದಲ್ಲಿ 30 ಜಿಲ್ಲೆಗಳಲ್ಲಿ ಸಭೆ, ಸಂವಾದ, ಸುದ್ದಿಗೋಷ್ಠಿಗಳನ್ನು ನಡೆಸುವುದು. ಮೂರನೆ ಹಂತದಲ್ಲಿ ಸರಕಾರಕ್ಕೆ ಎಚ್ಚರಿಕೆ ಗಂಟೆ ನೀಡುವುದಕ್ಕಾಗಿ ಬೆಂಗಳೂರಿನಲ್ಲಿ ಮಹಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರ.ಕಾರ್ಯ ದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಱಚಲೋ ಉಡುಪಿೞಈ ದಶಕದ ಹೊಸ ಚಳವಳಿ. ಈ ಚಳವಳಿಯಲ್ಲಿ ತೋಡಗಿಸಿಕೊಳ್ಳಲು ಯುವ ತಲೆಮಾರು ಹೊಸ ಆಶಯದೊಂದಿಗೆ ಮುನ್ನುಗ್ಗುತ್ತಿದೆ. ದಲಿತ, ಎಡಪಂಥೀಯ ಸಂಘಟನೆಗಳು, ರಾಜ್ಯದ ಶ್ರೇಷ್ಠ ಸಾಹಿತಿ, ಬರಹಗಾರರು, ಕಲಾವಿದರು ಈ ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್, ಪ್ರೊ.ಫಣಿರಾಜ್, ದಿನಕರ ಎಸ್.ಬೆಂಗ್ರೆ, ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಸುಂದರ್ ಮಾಸ್ಟರ್, ಶ್ಯಾಮಸುಂದರ್ ತೆಕ್ಕಟ್ಟೆ, ಸುಂದರ್ ಕಪ್ಪೆಟ್ಟು, ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಖಲೀಲ್ ಅಹ್ಮದ್, ಖತೀಬ್ ಅಬ್ದುಲ್ ರಶೀದ್, ಸಲಾವುದ್ದೀನ್ ಅಬ್ದುಲ್ಲಾ, ಹುಸೈನ್ ಕೋಡಿಬೆಂಗ್ರೆ, ಕನಕದಾಸ ಸೇವಾ ಸಮಿತಿಯ ಹನು ಮಂತಪ್ಪ, ರಾಘವ ಮೊಗವೀರ, ವಿಚಾರವಾದಿ ವೇದಿಕೆಯ ಬಾಲಕೃಷ್ಣ ಪರ್ಕಳ ಮೊದಲಾದವರು ಉಪಸ್ಥಿತರಿದ್ದರು.







