'ಹನಿ ಟ್ರ್ಯಾಪ್’: ಆರು ಮಂದಿ ಸೆರೆ

ಮಂಗಳೂರು, ಸೆ. 23: ಬ್ಯಾಂಕ್ ಮ್ಯಾನೇಜರೊಬ್ಬರನ್ನು ವಂಚಿಸಿ ಒಂದು ಲಕ್ಷ ರೂ. ಬೇಡಿಕೆ ಇಟ್ಟು ಬೆದರಿಕೆ ಒಡ್ಡಿದ ಓರ್ವ ಯುವತಿ ಸೇರಿದಂತೆ ಆರು ಮಂದಿಯನ್ನು ಉರ್ವ ಹಾಗೂ ಬರ್ಕೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತರನ್ನು ಶ್ರೀಜಿತ್, ನಿತಿನ್, ರಂಜಿತ್, ಯತೀಶ್, ಅವಿನಾಶ್ ಹಾಗೂ ತೃಪ್ತಿ ಎಂದು ಗುರುತಿಸಲಾಗಿದೆ. ಬಳ್ಳಾಲ್‌ಬಾಗ್‌ನ ಫ್ಲಾಟೊಂದರಲ್ಲಿ ಬ್ಯಾಂಕ್ ಮ್ಯಾನೇಜರೊಬ್ಬರು ವಾಸವಾಗಿದ್ದರು. ಅದೇ ಕಟ್ಟಡದ ಫ್ಲಾಟ್‌ನಲ್ಲಿ ಶಿಲ್ಪಾ ಎಂಬ ಯುವತಿಯೂ ವಾಸವಾಗಿದ್ದಳು. ಆದರೆ, ಆಕೆಯ ವರ್ತನೆಯಲ್ಲಿ, ವ್ಯವಹಾರದಲ್ಲಿ ಸಂಶಯ ಬಂದದ್ದರಿಂದ ಆಕೆಯನ್ನು ಆ ಫ್ಲಾಟ್ನಿಂದ ಓಡಿಸಲಾಗಿತ್ತು. ಈಕೆ ಬ್ಯಾಂಕ್ ಮ್ಯಾನೇಜರ್‌ರ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದು, ಈ ಸಂಖ್ಯೆಗೆ ಫೋನ್ ಮಾಡಿ ಆಕೆ ಮ್ಯಾನೇಜರ್‌ಗೆ ಬ್ಲಾಕ್‌ಮೇಲ್ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಬ್ಯಾಂಕ್ ಪರೀಕ್ಷೆ ಬರೆದಿರುವ ಯುವತಿಯೊಬ್ಬಳಿಗೆ ಉದ್ಯೋಗ ನೀಡುವಲ್ಲಿ ಸಹಕರಿಸಬೇಕು ಎಂದು ಬ್ಯಾಂಕ್ ಮ್ಯಾನೇಜರ್‌ಗೆ ಶಿಲ್ಪಾ ಕರೆ ಮಾಡಿದ್ದಳು. ಈ ವೇಳೆ ಆಕೆಯನ್ನು ಕಚೇರಿಗೆ ಬರಲು ಹೇಳಿ ಎಂದು ಮ್ಯಾನೇಜರ್ ಹೇಳಿದ್ದರೆನ್ನಲಾಗಿದೆ. ಕಚೇರಿಗೆ ಬೇಡ ಮನೆಗೆ ಹೋಗಲು ಹೇಳುತ್ತೇನೆ ಎಂದು ಶಿಲ್ಪಾ ಹೇಳಿದ್ದಾಳೆ. ಶಿಲ್ಪಾ ಷಡ್ಯಂತ್ರ ರೂಪಿಸಿ ಮ್ಯಾನೇಜರ್ ಮನೆಗೆ ಯುವತಿ ತೃಪ್ತಿ ಹಾಗೂ ಐವರನ್ನು ಕಳುಹಿಸಿದ್ದಾಳೆ. ಈ ತಂಡ ಎರಡು ದಿನಗಳೊಳಗೆ ಒಂದು ಲಕ್ಷ ರೂ. ನೀಡಬೇಕು. ಇಲ್ಲದಿದ್ದಲ್ಲಿ ಮನೆಯಲ್ಲೇ ವೇಶ್ಯಾವಾಟಿಕೆ ಮಾಡುತ್ತೀದ್ದೀರೆಂದು ಪ್ರಚಾರ ಮಾಡುವುದಾಗಿ ಮ್ಯಾನೇಜರ್‌ಗೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
ಬಳಿಕ ಇವರಲ್ಲಿದ್ದ ಚೆಕ್‌ಬುಕ್ ಹಾಗೂ ಕೆಲವು ದಾಖಲೆಗಳನ್ನು ಕೊಂಡೊಯ್ದ ಈ ತಂಡ ಲಕ್ಷ ರೂ.ಗೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಆರೋಪಿಗಳ ಬೆದರಿಕೆಯಿಂದ ಕಂಗಾಲಾದ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಶಿಲ್ಪಾ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿಲ್ಪಾ ಕಾಲುಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದುದರಿಂದ ಈಕೆಯನ್ನು ಬಂಧಿಸಿಲ್ಲ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







