ಉರಿ ದಾಳಿಕೋರರಿಗೆ ಪಾಠ
ಮನ್ ಕೀ ಬಾತ್‌ನಲ್ಲಿ ಮೋದಿ
ಹೊಸದಿಲ್ಲಿ, ಸೆ.25: ಪ್ರಧಾನಿ ನರೇಂದ್ರ ಮೋದಿ ಇಂದು ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕೀ ಬಾತ್'ನಲ್ಲಿ ಕಾಶ್ಮೀರಿ ಜನರನ್ನುದ್ದೇಶಿಸಿ, ಉರಿ ಭಯೋತ್ಪಾದಕ ದಾಳಿಯ ಕುರಿತಾಗಿ ಮಾತನಾಡಿದ್ದಾರೆ. ಕಾಶ್ಮೀರಿ ಜನರನ್ನು ರಕ್ಷಿಸುವ ಹೊಣೆ ಭಾರತ ಸರಕಾರದ್ದಾಗಿದೆ. ನಮ್ಮ ಸೇನೆಯು ಉರಿಯಂತಹ ದಾಳಿಗಳನ್ನು ವಿಫಲಗೊಳಿಸುವ ಕಾರ್ಯವನ್ನು ಮುಂದುವರಿಸಲಿದೆ. ಇದರಿಂದ ನಾಗರಿಕರು ಶಾಂತಿಯಿಂದ ಬದುಕಬಹುದೆಂದು ಅವರು ಹೇಳಿದ್ದಾರೆ.
''ನಮ್ಮ ಸೈನಿಕರಲ್ಲಿ ನಮಗೆ ವಿಶ್ವಾಸವಿದೆ. ನಮಗೆ ನಾಗರಿಕರಿಗೆ, ರಾಜಕೀಯ ನಾಯಕರಿಗೆ ಮಾತನಾಡಲು ಹಲವು ಅವಕಾಶಗಳಿವೆ ಮತ್ತು ನಾವು ಮಾತನಾಡುತ್ತೇವೆ. ಆದರೆ, ಸೇನೆಯು ಮಾತನಾಡುವುದಿಲ್ಲ. ಸೈನಿಕರು ತಮ್ಮ ಕೌರ್ಯದ ಮೂಲಕ ಮಾತನಾಡುತ್ತಾರೆ'' ಎಂದು ಮೋದಿ ತಿಳಿಸಿದ್ದಾರೆ.
ಸೆ.18ರ ಉರಿ ದಾಳಿಯಲ್ಲಿ 18 ಮಂದಿ ಯೋಧರು ಹುತಾತ್ಮ ರಾದುದು ಇಡೀ ದೇಶಕ್ಕಾದ ನಷ್ಟವಾಗಿದೆ. ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದೆಂದು ಅವರು ಹೇಳಿದ್ದಾರೆ.
ನಮ್ಮ ದೇಶವನ್ನು ವಿರೋಧಿಸುವ ಶಕ್ತಿಗಳನ್ನು ಗುರುತಿಸುವ ಕೆಲಸವನ್ನು ತಾವು ಆರಂಭಿಸಿದ್ದೇವೆ. ಕಾಶ್ಮೀರದ ಜನರು ಶಾಂತಿ ಹಾಗೂ ಅಭಿವೃದ್ಧಿಯ ಮಾರ್ಗವನ್ನು ಅಳವಡಿಸಿಕೊಂಡಿದ್ದಾರೆ. ಶಾಲಾ-ಕಾಲೇಜುಗಳು ಶೀಘ್ರವೇ ಕೆಲಸ ಆರಂಭಿಸಬೇಕೆಂದು ಹೆತ್ತವರು ಬಯಸುತ್ತಿದ್ದಾರೆ. ತಮ್ಮ ಆಹಾರೋತ್ಪನ್ನ ಹಾಗೂ ಹಣ್ಣುಗಳು ಭಾರತದ ಇತರ ಭಾಗಗಳ ಮಾರುಕಟ್ಟೆಗಳಿಗೆ ತಲುಪಬೇಕೆಂದು ಕಾಶ್ಮೀರಿಗಳು ಬಯಸುತ್ತಾರೆ. ವ್ಯಾಪಾರ ಹಾಗೂ ವಾಣಿಜ್ಯ ಸುಗಮವಾಗಿ ಕೆಲಸ ಮಾಡಬೇಕೆಂದು ಮೋದಿ ತಿಳಿಸಿದ್ದಾರೆ.





