ಭಾರತೀಯ ಸಂವಿಧಾನವನ್ನು ನಂಬದವರಲ್ಲಿ ಮಾತುಕತೆಯಿಲ್ಲ: ಶಾ
ಕೋಝಿಕ್ಕೋಡ್, ಸೆ.25: ಭಾರತದ ಸಂವಿಧಾನದ ಮೇಲೆ ವಿಶ್ವಾಸವಿಲ್ಲದ, ಆದರೂ ತಮ್ಮನ್ನು ಭಾರತೀಯರೆಂದು ಹೇಳಿಕೊಳ್ಳುತ್ತಿರುವವರೊಂದಿಗೆ ಕೇಂದ್ರ ಸರಕಾರವು ಮಾತುಕತೆ ನಡೆಸುವುದಿಲ್ಲ ಎಂದು ಇಂದಿಲ್ಲಿ ಹೇಳುವ ಮೂಲಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಕಾಶ್ಮೀರದಲ್ಲಿ ಪರಿಸ್ಥಿತಿಯು ಚಿಂತಾಜನಕ ವಾಗಿದೆಯೆಂಬುದನ್ನು ಒಪ್ಪಿಕೊಂಡ ಅವರು, ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಿಸಲು ಸಾಧ್ಯವೆಂದು ಯಾರಾದರೂ ಯೋಚಿಸು ತ್ತಿದ್ದರೆ, ಅದು ಹಗಲು ಕನಸಲ್ಲದೆ ಬೇರೇನಲ್ಲ. ಅದೆಂದೂ ಸಾಧ್ಯವಾಗದು ಎಂದಿದ್ದಾರೆ.
ಇಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ ಉದ್ಘಾಟನಾ ಭಾಷಣ ಮಾಡುತ್ತಿದ್ದ ಶಾ, ಪಕ್ಷದ ಗರೀಬ್ ಕಲ್ಯಾಣ್ ಕಾರ್ಯಸೂಚಿಯನ್ನು ಪ್ರಸ್ತಾಪಿಸಿದರು. ನರೇಂದ್ರಮೋದಿ ಪ್ರಧಾನಿಯಾದಂದಿನಿಂದ ಕೇಂದ್ರ ಸರಕಾರವು ಬಡವರ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ. ಮುಂದಿನ ಒಂದು ವರ್ಷವನ್ನು ಗರೀಬ್ ಕಲ್ಯಾಣ್ ವರ್ಷವನ್ನಾಗಿ ಆಚರಿಸಲಾಗುವುದೆಂದು ತಿಳಿಸಿದರು.
ಪ್ರಧಾನಿ ಹಾಗೂ ಇತರ ಹಿರಿಯ ನಾಯಕರಿದ್ದ ಸಭೆಯಲ್ಲಿ ಅವರು ತನ್ನ ಭಾಷಣದ ಹೆಚ್ಚು ಭಾಗವನ್ನು ಇಂದು 100ನೆ ಜನ್ಮ ಜಯಂತಿ ಆಚರಿಸಲ್ಪಡುತ್ತಿರುವ ಪಕ್ಷದ ಸಿದ್ಧಾಂತಕಾರ ದಿವಂಗತ ದೀನದಯಾಳ್ ಉಪಾಧ್ಯಾಯ ಹಾಗೂ ಅವರ ಅಂತ್ಯೋದಯ ಮತ್ತು ಸಮಗ್ರ ಮಾನವತಾ ತತ್ವಗಳಿಗೆ ಮೀಸಲಿರಿಸಿದರು.
ಕಾಶ್ಮೀರ ಹಿಂಸಾಚಾರ ಹಾಗೂ ಉರಿ ಭಯೋತ್ಪಾದಕ ದಾಳಿಗಳನ್ನುಲ್ಲೇಖಿಸಿದ ಶಾ, ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ವಿಶ್ವದ ಯಾವುದೇ ಶಕ್ತಿಗೂ ಅದನ್ನು ನಮ್ಮಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲವೆಂದು ಒತ್ತಿ ಹೇಳಿದರು.
ಬಿಜೆಪಿ ನೇತೃತ್ವದ ಸರಕಾರ ಶಾಂತಿಯ ಎಲ್ಲ ಮಾರ್ಗಗಳ ಬಗ್ಗೆ ಚರ್ಚಿಸಲು ಬಯಸುತ್ತಿದೆ. ಆದರೆ, ತಮ್ಮನ್ನು ಭಾರತೀಯರೆಂದು ಪರಿಗಣಿಸುವವರೊಂದಿಗೆ ಮಾತ್ರ ಅದು ಮಾತುಕತೆ ನಡೆಸುತ್ತದೆ. ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಯಾರೊಂದಿಗೂ ಮಾತುಕತೆ ನಡೆಸುವುದಿಲ್ಲವೆಂದು ಅವರು ತಿಳಿಸಿದರು.
ಭಾರತದ ಸಂವಿಧಾನದ ಚೌಕಟ್ಟಿನೊಳಗೆ ಮಾತುಕತೆ ಅಸಾಧ್ಯವೆಂದು ಒತ್ತಿ ಹೇಳುತ್ತಿರುವ ಪ್ರತ್ಯೇಕತಾವಾದಿಗಳಿಗೆ ಇದು ಸ್ಪಷ್ಟ ಸಂದೇಶವಾಗಿದೆ.





