ಸಮುದಾಯ ಅಭಿವೃದ್ಧಿ ಚಿಂತನೆಗೆ ಸಂಘಟನೆ ಸಹಕಾರಿ: ಶಾಸಕ ಲೋಬೊ

ಉಳ್ಳಾಲ, ಸೆ.25: ಕ್ರೈಸ್ತ ಸಮುದಾಯದಲ್ಲಿ ಬಹುತೇಕ ಮಂದಿ ವಿದೇಶದಲ್ಲಿ ಉದ್ಯೋಗ ಅರಸುವ ಮುಖಾಂತರ ವೈಯಕ್ತಿಕ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿದ್ದಾರೆ. ಇದರಿಂದಾಗಿ ಇಂದಿಗೂ ರಾಜಕೀಯ, ಸರಕಾರಿ ಇಲಾಖೆಗಳಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಕ್ರೈಸ್ತರಿದ್ದಾರೆ. ಈ ಹಿನ್ನೆಲೆಯಲ್ಲಿ ಚರ್ಚ್ ಮಟ್ಟದಲ್ಲೇ ವ್ಯವಸ್ಥಿತ ಸಂಘಟನೆ ಕಟ್ಟುವುದು ಅನಿವಾರ್ಯ. ಧಾರ್ಮಿಕ ಕ್ಷೇತ್ರ, ಸಮುದಾಯದ ಅಭಿವೃದ್ಧಿ ಬಗ್ಗೆ ಚಿಂತಿಸಲು ಇದು ಸಹಕಾರಿ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು. ತೊಕ್ಕೊಟ್ಟಿನ ಪೆರ್ಮನ್ನೂರು ಸಂತ ಸೆಬಾಸ್ತಿಯನ್ ಪಪೂ ಕಾಲೇಜಿನ ಸಭಾಂಗಣದಲ್ಲಿ ರವಿವಾರ ನಡೆದ ಕೆಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯದ 2016ನೆ ಸಾಲಿನ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ಮಾತನಾಡಿದ ಕೆಥೊಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಅನಿಲ್ ಲೋಬೊ, ಕೆಥೊಲಿಕ್ ಸಭಾ ಆರಂಭವಾಗಿ 38 ವರ್ಷಗಳಾಗಿವೆ. ವಿವಿಧ ಉದ್ದೇಶಗಳೊಂದಿಗೆ ಸಂಘಟನೆ ಆರಂಭದಿಂದ ಇಂದಿಗೂ ಸಭೆ, ಸಮಾರಂಭಗಳು ಕೆಲವೇ ಮಂದಿಗೆ ಸೀಮಿತವಾಗಿದೆ. ಆರ್ಥಿಕ ಬಲವುಳ್ಳವರು ತಮ್ಮ ಅಭಿವೃದ್ಧಿ ಬಗ್ಗೆ ಚಿಂತಿಸಿ ಆರಾಮವಾಗಿದ್ದಾರೆ. ಈ ಕಾರಣದಿಂದ ಸಂಘಟನೆ ಎನ್ನುವುದು ಬಡ ಮತ್ತು ಮಧ್ಯಮ ವರ್ಗದವರಿಗೆ ಸೀಮಿತ ಎಂಬತಾಗಿದೆ. ಯಾರದ್ದೋ ಮಾದರಿ ಜೀವನದ ಬಗ್ಗೆ ಮಾತನಾಡುವ ಬದಲು 33 ವರ್ಷಗಳ ಜೀವನದಲ್ಲಿ ಯೇಸು ಕ್ರಿಸ್ತರು ಮಾಡಿದ ಸಮಾಜಸೇವೆ, ನಡೆದ ದಾರಿಯೇ ನಮಗೆ ಮಾದರಿಯಾಗಬೇಕಿದೆ ಎಂದು ಹೇಳಿದರು. ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಆಧ್ಯಾತ್ಮಿಕ ನಿರ್ದೇಶಕ ವಂ.ಮ್ಯಾಥ್ಯೂ ವಾಸ್ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ನಡೆದ ದೇಹದಾನ ಕಾರ್ಯಕ್ರಮದಲ್ಲಿ ನೇತ್ರ ಮತ್ತು ಅಂಗಾಂಗ ದಾನಿಗಳ ನೋಂದಣಿ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಐವರು ತಮ್ಮ ಸಾವಿನ ಬಳಿಕ ದೇಹದಾನಕ್ಕೆ ಸಹಿ ಹಾಕಿದರೆ, 10 ಮಂದಿ ಕಣ್ಣು, 10 ಮಂದಿ ದೇಹದ ವಿವಿಧ ಅಂಗಾಂಗ ದಾನಕ್ಕೆ ಸಹಿ ಹಾಕಿದರು. 52 ಮಂದಿ ರಕ್ತದಾನಕ್ಕೆ ಹೆಸರು ನೋಂದಾಯಿಸಿದರು. ಮತ್ಸೋದ್ಯಮಿ ಹೆರಾಲ್ಡ್ ಡಿಸೋಜಾ, ಕೃಷಿಕ ಲ್ಯಾನ್ಸಿ ಡಿಸೋಜಾ, ಕೋಟೆಕಾರ್ ಪಪಂ ಸದಸ್ಯ ಲ್ಯಾನ್ಸಿ ಡಿಸೋಜಾ, ತಾಪಂ ಸದಸ್ಯೆ ಅಲ್ಮೀಡಾ ವಿಲ್ಮಾ ಡಿಸೋಜಾ, ಕೆಥೊಲಿಕ್ ಸಭಾ ಅಧ್ಯಕ್ಷ ಅನಿಲ್ ಲೋಬೊ, ವಿದ್ಯಾರ್ಥಿನಿ ಲವಿಟಾ ರೊಲಿಟಾ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.
ಸಂತ ಸೆಬಾಸ್ತಿಯನ್ ಕಾಲೇಜಿನ ಪ್ರಾಂಶುಪಾಲ ವಂ.ಎಡ್ವಿನ್ ಮಸ್ಕರೇನ್ಹಸ್, ಕೆಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯ ಆಧ್ಯಾತ್ಮಿಕ ನಿರ್ದೇಶಕ ಫಾ.ಜೆ.ಬಿ.ಸಲ್ದಾನ, ಉಳ್ಳಾಲ ನಿರ್ಮಲಾ ಕಾನ್ವೆಂಟ್ ಮುಖ್ಯಸ್ಥೆ ಸಿ.ಎಂ.ಜೋಸೆಫ್, ಪೆರ್ಮನ್ನೂರು ಸಂತ ಸೆಬಾಸ್ತಿಯನ್ ಚರ್ಚ್ ಪಾಲನಾ ಮಂಡಳಿ ಉಪಪಾಧ್ಯಕ್ಷ ಲೂಕಸ್ ಡಿಸೋಜಾ, ಕೆಥೊಲಿಕ್ ಸಭಾ ಪೆರ್ಮನ್ನೂರು ಘಟಕಾಧ್ಯಕ್ಷ ಅರುಣ್ ಡಿಸೋಜಾ, ಕೆಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯ ಸಂಚಾಲಕ ಹಿಲರಿ ಡಿಸೋಜಾ ಪಜೀರ್, ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಕೆಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯಾಧ್ಯಕ್ಷ ವಿನ್ಸೆಂಟ್ ಡಿಸೋಜಾ ಪಜೀರ್ ಸ್ವಾಗತಿಸಿದರು. ಕಾರ್ಯದರ್ಶಿ ಫೆಲಿಕ್ಸ್ ಮೊಂತೆರೊ ವಂದಿಸಿದರು. ಮೆಲ್ವಿನ್ ಡಿಸೋಜಾ ಹಾಗೂ ಪ್ರಮೀಳಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.





