ಕೇರಳ ಸರಕಾರ ಸಂಪೂರ್ಣ ವಿದ್ಯುದೀಕರಣಕ್ಕೆ ಲಗ್ಗೆ
ಕಾಸರಗೋಡು, ಸೆ.25: ಕೇರಳ ಸರಕಾರ ಸಂಪೂರ್ಣ ವಿದ್ಯುದೀಕರಣಕ್ಕೆ ಹೆಜ್ಜೆ ಮುಂದಿಟ್ಟಿದೆ. ಪ್ರತಿಯೊಂದು ಮನೆಗೂ ವಿದ್ಯುತ್ ತಲುಪಿಸಬೇಕು ಎಂಬ ಗುರಿ ಹೊಂದಿದೆ.
2017ರ ಮಾರ್ಚ್‌ನಲ್ಲಿ ಜಿಲ್ಲೆಯನ್ನು ಸಂಪೂರ್ಣ ವಿದ್ಯುದ್ದೀಕರಣ ಎಂದು ಘೋಷಿಸಲು ಸರಕಾರ ಮುಂದಾಗಿದೆ. ಈ ಹಿನ್ನಲೆಯಲ್ಲಿ ನಡೆಸಿದ ಸಮೀಕ್ಷೆಯಂತೆ 7,957 ಮಂದಿಗೆ ವಿದ್ಯುತ್ ಸಂಪರ್ಕ ಲಭಿಸಬೇಕಿದೆ.
ಭೀಮನಡಿ ಸೆಕ್ಷನ್ ವ್ಯಾಪ್ತಿಯಲ್ಲಿ ಅತ್ಯಧಿಕ 836, ರಾಜಾಪುರ 776 ಗರಿಷ್ಠ ಹಾಗೂ ಪಡನ್ನಕಾಡು ಸೆಕ್ಷನ್ ವ್ಯಾಪ್ತಿಯಲ್ಲಿ ಕನಿಷ್ಠ 28 ಮಂದಿ ಫಲಾನುಭವಿಗಳಿದ್ದು, ಅರ್ಜಿಗಳನ್ನು ಸೂಕ್ಷ್ಮ ಪರಿಶೀಲನೆಗೊಳಪಡಿಸಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳು ಆದೇಶ ನೀಡಿದ್ದಾರೆ.
ಹಲವು ಮಂದಿ ಎರಡು ಅರ್ಜಿಗಳನ್ನು ಸಲ್ಲಿಸಿರುವುದು ಬೆಳಕಿಗೆ ಬಂದಿದ್ದು, ಇದರಿಂದ ಸೂಕ್ತ ಪರಿಶೀಲನೆ ನಡೆಸಲಾಗುತ್ತಿದೆ.
2578 ಸಂಪರ್ಕಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ಪೈಕಿ 1,555 ಸಂಪರ್ಕಕ್ಕೆ ಕಂಬ ಅಗತ್ಯವಿಲ್ಲ. 4,21,17,444 ರೂ. ಬಿಪಿಎಲ್ ಕುಟುಂಬಗಳಿಗೆ ಸಂಪರ್ಕ ನೀಡಲು ವಿದ್ಯುನ್ಮಂಡಲಿ ಪಾವತಿಸಲಿದೆ. ಭೀಮನಡಿ ಸೆಕ್ಷನ್ ವ್ಯಾಪ್ತಿಯಲ್ಲಿ ಅತ್ಯಧಿಕ ಪರಿಶಿಷ್ಟ ಸಮುದಾಯದ ಮನೆಗಳಿದ್ದು, ಈ ಮನೆಗಳಿಗೆ ಶೀಘ್ರ ಸಂಪರ್ಕ ಲಭಿಸಲಿದೆ.





