ಕೇಂದ್ರ ಸರಕಾರ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ: ಐವನ್
ಮಂಗಳೂರು, ಸೆ.25: ಕೇಂದ್ರ ಸರಕಾರ ಮತ್ತು ರಾಜ್ಯದ ಬಿಜೆಪಿ ನಾಯಕರು ಕಾವೇರಿ ನದಿ ಬಿಕ್ಕಟ್ಟಿಗೆ ಸಂಬಂಧಿಸಿ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ ಆರೋಪಿಸಿದ್ದಾರೆ.
ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ ಸದಸ್ಯರು ಮತ್ತು ರಾಜ್ಯದಿಂದ ಆಯ್ಕೆಯಾದ ಕೇಂದ್ರ ಮಂತ್ರಿಗಳು ಪ್ರಧಾನಿ ಮನವೊಲಿಸಲು ವಿಲರಾಗಿದ್ದಾರೆ. ಈ ಮೂಲಕ ರಾಜ್ಯ ಸರಕಾರದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸರಕಾರವೇ ಮಧ್ಯಪ್ರವೇಶಿಸಬೇಕೆಂಬುದು ರಾಜ್ಯದ ಜನರ ಆಗ್ರಹ. ಆದರೆ ರಾಜ್ಯ ಬಿಜೆಪಿ ಜನಪ್ರತಿನಿಧಿಗಳು ಮೋದಿ ಮಧ್ಯಪ್ರವೇಶಿಸಲ್ಲ ಎಂದಿದ್ದಾರೆ. ಸ್ವತ: ಮೋದಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿಲ್ಲ. ಹೀಗಾಗಿ ಇದು ರಾಜ್ಯ ಬಿಜೆಪಿಯವರಿಗೆ ಹೇಗೆ ಗೊತ್ತಾಗಿದೆ ಎಂಬುದು ನಮ್ಮ ಪ್ರಶ್ನೆ ಎಂದರು.
ರಾಜ್ಯದ ಸಮಸ್ಯೆ ಬಗ್ಗೆ ಮೋದಿ ಮಧ್ಯಸ್ಥಿಕೆ ವಹಿಸಬೇಕಿತ್ತು. ಮುಖ್ಯಮಂತ್ರಿಗಳು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರನ್ನು ಭೇಟಿಯಾಗಿದ್ದರೂ ವೌನವಾಗಿದ್ದಾರೆ. ಕಾವೇರಿ ಜ್ವಲಂತ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿ ಅವರಿಗೆ ಇದುವರೆಗೆ 8 ಬಾರಿ ಮುಖ್ಯಮಂತ್ರಿಗಳು ಪತ್ರ ಬರೆದಿದ್ದರೂ ಭೇಟಿಗೆ ಅವಕಾಶವನ್ನೇ ನೀಡಿಲ್ಲ ಎಂದರೆ ದು ಎಷ್ಟರ ಮಟ್ಟಿಗೆ ಸರಿ ಎಂದವರು ಪ್ರಶ್ನಿಸಿದರು.
ಮಂಗಳೂರು ನಗರ ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿರುವುದು ಸಂತೋಷದ ವಿಚಾರ. ಸ್ಮಾರ್ಟ್‌ಸಿಟಿ ಯೋಜನೆ ಅನುದಾನ, ಎಡಿಬಿ, ಅಮೃತ್ ಯೋಜನೆ, ಪಾಲಿಕೆ ಅನುದಾನ ಸಹಿತ ಒಟ್ಟು ಅಂದಾಜು 2002 ಕೋ.ರೂ. ಬಳಸಿ ಮುಂದಿನ 5 ವರ್ಷದೊಳಗೆ ವ್ಯವಸ್ಥಿತ ಯೋಜನೆಗಳೊಂದಿಗೆ ನಗರ ಅಭಿವೃದ್ಧಿಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾಗೇಂದ್ರ ಕುಮಾರ್, ಪಿ.ಮನುರಾಜ್, ಭಾಸ್ಕರ್ ರಾವ್, ವಸಂತ ಶೆಟ್ಟಿ, ಸವಾದ್ ಗೂನಡ್ಕ, ಸ್ಟೀಪನ್ ಮರೋಳಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.





