6,506 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ: ಸಚಿವ ಪಾಟೀಲ್

ಉಡುಪಿ, ಸೆ.25: ಕುಡಿಯುವ ಶುದ್ಧನೀರು ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಲಭ್ಯವಾಗಬೇಕೆಂಬ ಉದ್ದೇಶದಿಂದ ಕಲುಷಿತ ನೀರು ಇರುವ ರಾಜ್ಯದ 7,102 ಗ್ರಾಮಗಳ ಪೈಕಿ 6,506 ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಕೋಟತಟ್ಟು ಗ್ರಾಪಂ ಹಾಗೂ ಕೋಟ ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಸಹಯೋಗದಲ್ಲಿ ಡಾ.ಶಿವರಾಮ ಕಾರಂತರ ಜನ್ಮ ದಿನೋತ್ಸವದ ಅಂಗ ವಾಗಿ ರವಿವಾರ ಕೋಟ ವಿವೇಕ ಹೈಸ್ಕೂಲ್ ಮೈದಾನ ದಲ್ಲಿ ಆಯೋಜಿಸಲಾದ ಉಡುಪಿ, ದ.ಕ. ಜಿಲ್ಲೆಗಳ ಪಂಚಾಯತ್‌ರಾಜ್ ಮತ್ತು ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಂಚಾಯತ್‌ರಾಜ್ ಕಾನೂನು ತರುವ ಮೂಲಕ ಗ್ರಾಮೀಣ ಬದುಕನ್ನು ಹಂಗಿನಿಂದ ಹಕ್ಕಿನ ಕಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಕಾನೂನಿನ ಮೂಲಕ ಗ್ರಾಪಂಗಳಿಗೆ ಪರಮಾಧಿಕಾರ ನೀಡಲಾಗಿದೆ. ಆರಂಭದಲ್ಲಿ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಶಾಸಕರು ಈಗ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಂಡು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಯಾವುದೇ ಪಕ್ಷವಿದ್ದರೂ ಅಭಿವೃದ್ಧಿ ಕೆಲಸದಲ್ಲಿ ಹಗ್ಗಜಗ್ಗಾಟ ಮಾಡಬಾರದು. ಸ್ಪರ್ಧೆಯಲ್ಲಿ ಎದುರಾಳಿ ರಾಜಕೀಯ ಪ್ರತಿಸ್ಪರ್ಧಿ ಯಾಗಿದ್ದರೂ ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕಾಗಿದೆ. ಶಿವರಾಮ ಕಾರಂತರ ಗ್ರಾಮದಲ್ಲಿ ನಡೆದ ಈ ಮಾದರಿಯ ಕ್ರೀಡಾಕೂಟ ವನ್ನು ಉಳಿದ ಎಲ್ಲ ಜಿಲ್ಲೆಗಳಲ್ಲೂ ನಡೆಸುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಲಿದೆ ಎಂದು ಅವರು ಹೇಳಿದರು.
ಕ್ರೀಡೋತ್ಸವಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಭಾರತದ ಶಕ್ತಿ, ಪ್ರಗತಿಯ ಕುರಿತ ಅನುಮಾನವನ್ನು ಈ ಸಮಾವೇಶ ದೂರ ಮಾಡುತ್ತಿದೆ. ಗ್ರಾಮಗಳ ಅಭಿವೃದ್ಧಿ ನಮ್ಮೆಲ್ಲರ ಉದ್ದೇಶವಾಗಬೇಕು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಧ್ವಜಾರೋಹಣ ನೆರವೇರಿಸಿದರು.ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಪ್ರತಿಜ್ಞಾ ವಿಧಿ ಬೋಧಿಸಿದರು. ಸಾಂಸ್ಕೃತಿಕ ಸ್ಪರ್ಧೆಗೆ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹಾಗೂ ಬೈಂದೂರು ಶಾಸಕ ಗೋಪಾಲ ಪೂಜಾರಿ ಚಾಲನೆ ನೀಡಿದರು.
ಕೋಟತಟ್ಟು ಗ್ರಾಪಂ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭ ಕ್ರೀಡಾಕೂಟದ ಪಥಸಂಚಲನದಲ್ಲಿ ಪ್ರಥಮ ಸ್ಥಾನ ಗಳಿಸಿದ ವರಂಗ ಗ್ರಾಪಂ, ದ್ವಿತೀಯ ಯಡ್ತಾಡಿ, ತೃತೀಯ ಸ್ಥಾನ ಗಳಿಸಿದ ನಾರಾವಿ ಗ್ರಾಪಂಗೆ ಬಹುಮಾನ ವಿತರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಪಂ ಉಪಾಧ್ಯಕ್ಷ ಶೀಲಾ ಕೆ.ಶೆಟ್ಟಿ, ಯುಪಿಸಿಎಲ್ ಅದಾನಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಆಳ್ವ, ಕೋಟ ವಿದ್ಯಾಸಂಘದ ಅಧ್ಯಕ್ಷ ಪ್ರಭಾಕರ ಮಯ್ಯ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು. ಆನಂದ ಸಿ.ಕುಂದರ್ ಸ್ವಾಗತಿಸಿದರು. ಪಿಡಿಒ ಹರೀಶ್ ಶೆಟ್ಟಿ ವಂದಿಸಿದರು. ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
5,700 ಗ್ರಾಪಂಗಳಿಂದ 5 ವರ್ಷಗಳ ಮುನ್ನೋಟ ಸಿದ್ಧ
ಪ್ರಜಾತಂತ್ರ ಬಂದ ನಂತರ ಸ್ವಾತಂತ್ರೋತ್ತರ ಭಾರತದಲ್ಲಿ ಯೋಜನೆಗಳು ದಿಲ್ಲಿ, ಬೆಂಗಳೂರು ಗಳಲ್ಲಿ ರಚನೆಯಾಗುತ್ತಿತ್ತು. ಗ್ರಾಪಂಗಳಿಗೆ ಬೇಕಾದ ಅಗತ್ಯಗಳು ಹಾಗೂ ಗ್ರಾಮದ ಜನರ ಅಭಿಪ್ರಾಯಗಳನ್ನು ಕೇಳುವವರೇ ಇರಲಿಲ್ಲ. ಇದೀಗ ಈ ಹೊಸ ಕಾನೂನಿನ ಮೂಲಕ ತಳಮಟ್ಟದಿಂದ ಮೇಲ್ಮಟ್ಟಕ್ಕೆ ಯೋಜನೆ ತಯಾರಿಸುವ ಕೆಲಸ ಪ್ರಾರಂಭಿಸಲಾಗಿದೆ. ಅದಕ್ಕಾಗಿ ಈಗಾಗಲೇ 10 ಸಾವಿರ ವಾರ್ಡ್ ಸಭೆ ಮತ್ತು 8 ಸಾವಿರ ಗ್ರಾಮಸಭೆಗಳನ್ನು ನಡೆಸಲಾಗಿದೆ. ‘ನಮ್ಮ ಗ್ರಾಮ ನಮ್ಮ ಯೋಜನೆ’ಯಡಿ ರಾಜ್ಯದ 5,700 ಗ್ರಾಪಂಗಳು ಮುಂದಿನ ಐದು ವರ್ಷಗಳ ಮುನ್ನೋಟವನ್ನು ತಯಾರಿಸುವ ಕಾರ್ಯ ಪೂರ್ಣಗೊಳಿಸಿ, ಅದನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಜನರನ್ನು ಯೋಜನೆ ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿರುವುದು ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿಯೇ ಹೊಸ ದಾಖಲೆಯಾಗಿದೆ.
-ಸಚಿವ ಎಚ್.ಕೆ.ಪಾಟೀಲ್







