ದರೋಡೆಕೋರರ ಬಗ್ಗೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ
ಕಾಸರಗೋಡು, ಸೆ.25: ಹೊಸ ಶೈಲಿಯಲ್ಲಿ ಕಳ್ಳತನ ಮಾಡುವ ದರೋಡೆಕೋರರು ಜಿಲ್ಲೆಯಲ್ಲಿ ಬೀಡುಬಿಟ್ಟಿರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ. ಹೊರ ರಾಜ್ಯದಿಂದ ತಂಡಗಳು ಜಿಲ್ಲೆಗೆ ಬಂದಿದ್ದು, ವಿಭಿನ್ನ ಮಾದರಿಯ ದರೋಡೆ, ಪರ್ಸ್, ಚಿನ್ನಾಭರಣ ಕಳವು ಹೀಗೆ ಹಲವು ವಿಧದ ದರೋಡೆ ಈ ತಂಡದ ಗುರಿಯಾಗಿದೆ.
ಇತ್ತೀಚಿನ ದಿನಗಳಿಂದ ಜಿಲ್ಲೆಯ ಹಲವಡೆ ನೂರಕ್ಕೂಅಧಿಕ ಕಳವು ದರೋಡೆ ಪ್ರಕರಣಗಳು ನಡೆದಿವೆ. ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಮನೆ, ಅಂಗಡಿ ಹಾಗೂ ಇನ್ನಿತರ ಹಲವು ಕಳ್ಳ ತನ ನಡೆದಿದ್ದು, ಇದು ಜನತೆಯಲ್ಲಿ ಭೀತಿ ಉಂಟು ಮಾಡ ತೊಡಗಿದೆ. ದರೋಡೆಕೋರರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಲಘು ಪತ್ರ ಹಂಚುವ ಹಾಗೂ ಮುನ್ನೆಚ್ಚರಿಕೆ ನೀಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ಸಾರ್ವಜನಿಕರ ರಕ್ಷಣೆಗೆ ಮುಂದಾಗಿದ್ದಾರೆ.
ರಾತ್ರಿ ಸಮಯದಲ್ಲಿ ಮನೆಯ ಹೊರಗಡೆ ಮಗು ಅಳು ವುದನ್ನು ಕೇಳಿದರೆ, ನೀರಿನ ಟ್ಯಾಪ್‌ನಲ್ಲಿ ನೀರು ಹರಿಯುವ ಶಬ್ದ ಕೇಳಿದರೆ ಹಾಗೂ ಇನ್ನಿತರ ಶಬ್ದ ಕೇಳಿದ್ದಲ್ಲಿ ಬಾಗಿಲು ತೆರೆದು ಮನೆಯಿಂದ ಹೊರಬರಬಾರದು ಎಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.
ಕಾಲಿಂಗ್ ಬೆಲ್ ಹೊಡೆದರೂ ಕೂಡಲೇ ಬಾಗಿಲು ತೆರೆಯಬಾರದು. ಬಾಗಿಲು ತೆರೆಯುವ ಮೊದಲು ಹೊರಗೆಡೆ ಅಪರಿಚಿತರು ಇದ್ದಾರೆಯೇ ಎಂಬ ಬಗ್ಗೆ ಗಮನಿಸಬೇಕು. ಸಂಜೆ ಸಮಯದಲ್ಲಿ ಮನೆಯ ಪರಿಸರದಲ್ಲಿ ಅಪರಿಚಿತರು ಸುಳಿದಾಡುತ್ತಿದ್ದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಕಳ್ಳರ ಬಗ್ಗೆ ಸಾರ್ವಜನಿಕರು ವಿಶೇಷ ನಿಗಾ ಇರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.







