'ರಾಜ್ಯದಲ್ಲಿ ಕುಡಿಯಲು ಮಾತ್ರ ನೀರಿದೆ, ತಮಿಳುನಾಡಿಗೆ ಡಿಸೆಂಬರ್ ಅಂತ್ಯದವರೆಗೆ ನೀರು ಕೊಡಲು ಸಾಧ್ಯವಿಲ್ಲ
ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಆದೇಶ ಮಾರ್ಪಾಡು ಅರ್ಜಿಯಲ್ಲಿ ಕರ್ನಾಟಕದ ಹೇಳಿಕೆ

ಹೊಸದಿಲ್ಲಿ, ಸೆ.26: ರಾಜ್ಯದಲ್ಲಿ ಕುಡಿಯಲು ಮಾತ್ರ ನೀರಿದೆ. ತಮಿಳುನಾಡಿಗೆ ಕೊಡಲು ನೀರಿಲ್ಲ. ಡಿಸೆಂಬರ್ ಅಂತ್ಯದವರೆಗೂ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸುಪ್ರೀಂ ಕೋರ್ಟ್ ಗೆ ಸೋಮವಾರ ತಿಳಿಸಿದೆ.
ಸೆ.27ರ ತನಕ ತಮಿಳುನಾಡಿಗೆ ಆರು ಸಾವಿರ ಕ್ಯುಸೆಕ್ ಕಾವೇರಿ ನೀರು ಬಿಡಬೇಕೆಂದು ನೀಡಿರುವ ಆದೇಶವನ್ನು ಬದಲಾಯಿಸಬೇಕೆಂದು ಕೋರಿ ಕರ್ನಾಟಕ ಸರಕಾರ ಇಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಫಾಲಿ ನಾರಿಮನ್ ನೇತೃತ್ವದ ವಕೀಲರ ತಂಡ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕರ್ನಾಟದಲ್ಲಿ ಪ್ರಸ್ತುತ ಜಲಾಶಯಗಳ ಪರಿಸ್ಥಿತಿಯನ್ನು ವಿವರಿಸಿದೆ.
ಕಾವೇರಿ ಕೊಳ್ಳದ ಡ್ಯಾಂಗಳ ನೀರಿನ ಸಂಗ್ರಹವನ್ನು ಕುಡಿಯುವುದಕ್ಕೆ ವಿನಾ ಬೇರೆ ಉದ್ದೇಶಗಳಿಗೆ ಪೂರೈಸಬಾರದು' ಎಂದು ರಾಜ್ಯ ವಿಧಾನಮಂಡಲದ ಉಭಯ ಸದನಗಳು ಇದೇ 23ರಂದು ಅಂಗೀಕರಿಸಿದ್ದ ಸರ್ವಾನುಮತದ ಐತಿಹಾಸಿಕ ನಿರ್ಣಯದ ವಿಚಾರವನ್ನು ಮಾರ್ಪಾಡು ಅರ್ಜಿಯನ್ನು ಸಲ್ಲಿಸುವ ವೇಳೆ ನ್ಯಾಯಾಲಯದ ಗಮನ ಸೆಳೆಯಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.





