ಮರಳುಗಾರಿಕೆ, ಸಾಗಾಟಕ್ಕೆ ಅನುಮತಿ ನೀಡಲು ಒತ್ತಾಯಿಸಿ ಧರಣಿ

ಮಂಗಳೂರು, ಸೆ.26: ನ್ಯಾಯಬದ್ಧವಾಗಿ ಮರಳುಗಾರಿಕೆ ಹಾಗೂ ಸಾಗಾಟ ಮಾಡಲು ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ, ಇಂದು ದ.ಕ ಜಿಲ್ಲಾಧಿಕಾರಿ ಕಚೇರಿ ಮುಂದೆ ದ.ಕ ಜಿಲ್ಲಾ ಕಟ್ಟಡ ಸಾಮಗ್ರಿ ಸರಬರಾಜುದಾರರ ಮತ್ತು ಸಾಗಣೆ ವಾಹನ ಮಾಲಕರ ಚಾಲಕರ ಸಂಘದ ನೇತೃತ್ವದಲ್ಲಿ ಧರಣಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು, ಮರಳುಗಾರಿಕೆಗೆ ಅವಕಾಶ ನೀಡದಿದ್ದರೆ ಎಲ್ಲರೂ ಸೇರಿ ಬೀದಿಗಿಳಿದು ಹೋರಾಟ ಮಾಡಲಾಗುವುದು. ಜಿಲ್ಲೆಯ ಜನರ ಕಣ್ಣೀರು ಒರೆಸಲು ಆಮರಣಾಂತ ಉಪವಾಸ ಮಾಡಲೂ ಸಿದ್ದ ಎಂದು ಹೇಳಿದರು.
ಕಳೆದ 6 ತಿಂಗಳಿನಿಂದ ಮರಳಿನ ಅಭಾವವಾಗುತ್ತಿರುವುದರಿಂದ ಸಾಮಾನ್ಯ ಜನರು, ಬಿಲ್ಡರ್ಸ್, ಮನೆ ಕಟ್ಟುವವರು ಸಮಸ್ಯೆ ಗೀಡಾಗಿದ್ದಾರೆ. ದ.ಕ ಜಿಲ್ಲೆಯ ಸಿ ಆರ್ ಝಡ್ ಪ್ರದೇಶದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಯ ನಿರ್ಣಯ ದಂತೆ ಸಾಂಪ್ರದಾಯಿಕ ವಾಗಿ ಮರಳನ್ನು ತೆಗೆಯಲು ಪರವಾನಿಗೆ ನೀಡಲಾಗಿದ್ದರೂ ಪಟ್ಟಭದ್ರ ಹಿತಾಸಕ್ತಿ ಗಳ ಕೈವಾಡ ಮತ್ತು ರಾಜಕೀಯ ಪ್ರಭಾವ ದಿಂದ ಮರಳನ್ನು ತೆಗೆಯಲು ಬಿಡುತ್ತಿಲ್ಲ. ದಕ್ಷಿಣ ಕನ್ನಡ ದಲ್ಲಿ ಮರಳಿಗೆ ಅಭಾವವಾಗಿದ್ದರೂ ಹೊರರಾಜ್ಯಗಳಿಗೆ ಅನಧಿಕೃತವಾಗಿ ಮರಳು ಸರಬರಾಜು ಆಗುತ್ತಿದೆ. ಇದರ ಹಿಂದೆ ಜಿಲ್ಲಾಡಳಿತದ ಕೈವಾಡವಿದೆ . ಅಕ್ರಮ ಮರಳುಗಾರಿಕೆ ಮಾಡುವವರೊಂದಿಗೆ ಜಿಲ್ಲಾಡಳಿತ ಕೈಜೋಡಿಸಿದೆ ಎಂದು ಆರೋಪಿಸಿದರು.
ಅನಧಿಕೃತ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ದ.ಕ ಜಿಲ್ಲೆಯನ್ನು ಮರಳು ಮಾಫಿಯಾದಿಂದ ರಕ್ಷಿಸಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ಧರಣಿಯಲ್ಲಿ ಸಂಘದ ಮುಖಂಡರಾದ ರಣದೀಪ್ ಕಾಂಚನ್, ರಂಜಿತ್ ಜೆ. ಶೆಟ್ಟಿ, ಉದಯಕುಮಾರ್ ಶೆಟ್ಟಿ, ಧನರಾಜ್ ಕೋಟ್ಯಾನ್, ಮುಹಮ್ಮದ್ ಹನೀಫ್, ವೈಭವ್ ಶೆಟ್ಟಿ, ಮಿತೇಶ್, ಪ್ರೇಮನಾಥ್ ಶೆಟ್ಟಿ, ಶಿವಾನಂದ ಶೆಟ್ಟಿ, , ಪ್ರಾಂಕ್ಲಿನ್ ಮೊಂತೆರೋ, ತುರವೇ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, , ರಾಜೇಶ್ ಶೆಟ್ಟಿ ಪಜೀರ್ ಗುತ್ತು, ದೇವಿಪ್ರಸಾದ್ ಶೆಟ್ಟಿ, ಅನಿಲ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.







