ಐತಿಹಾಸಿಕ ಐನೂರನೆ ಟೆಸ್ಟ್ ನಲ್ಲಿ ವಿರಾಟ್ ಪಡೆಗೆ ನ್ಯೂಝಿಲೆಂಡ್ ವಿರುದ್ಧ 197ರನ್‌ಗಳ ವಿಜಯ
ಭಾರತದ ಸ್ಪಿನ್ ಮೋಡಿಗೆ ತತ್ತರಿಸಿದ ಕಿವೀಸ್

ಕಾನ್ಪುರ, ಸೆ.26: ಗ್ರೀನ್ ಪಾರ್ಕ್‌ನಲ್ಲಿ ನಡೆದ ಐತಿಹಾಸಿಕ ಐನೂರನೆ ಟೆಸ್ಟ್‌ನಲ್ಲಿ ಭಾರತ ಇಂದು ನ್ಯೂಝಿಲೆಂಡ್ ವಿರುದ್ಧ 197 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮೊದಲ ಟೆಸ್ಟ್‌ನ ಐದನೆ ಹಾಗೂ ಅಂತಿಮ ದಿನವಾಗಿರುವ ಸೋಮವಾರ ಎರಡನೆ ಇನಿಂಗ್ಸ್‌ನಲ್ಲಿ ಗೆಲುವಿಗೆ 434 ರನ್‌ಗಳ ಕಠಿಣ ಸವಾಲು ಪಡೆದಿದ್ದ ನ್ಯೂಝಿಲೆಂಡ್ 87.3 ಓವರ್‌ಗಳಲ್ಲಿ 236 ರನ್‌ಗಳಿಗೆ ಆಲೌಟಾಗಿದೆ.
ಭೋಜನಾ ವಿರಾಮದ ಬಳಿಕ ಆಟ ಆರಂಭಗೊಂಡು 43 ನಿಮಿಷ ಕಳೆಯುವಷ್ಟರಲ್ಲಿ 87.3ನೆ ಓವರ್‌ನಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತನ್ನ ‘ಕೇರಂ ಬಾಲ್’ನಲ್ಲಿ ವ್ಯಾಗ್ನರ್ ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸುವುದರೊಂದಿಗೆ ಭಾರತದ ಗೆಲುವನ್ನು ದೃಢಪಡಿಸಿದರು. ಐನೂರನೆ ಟೆಸ್ಟ್ ಗೆಲುವನ್ನು ಸ್ಮರಣೀಯವನ್ನಾಗಿಸಿದರು. ಇದಕ್ಕೂ ಮೊದಲು ಅವರು 19ನೆ ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದರು.
ಅಂತಿಮ ದಿನ ಅವರಿಗೆ ಐಶ್ ಸೋಧಿ ಮತ್ತು ನೀಲ್ ವ್ಯಾಗ್ನರ್ ವಿಕೆಟ್ ಸಿಕ್ಕಿತು. ಎರಡು ವಿಕೆಟ್‌ಗಳು ಮುಹಮ್ಮದ್ ಶಮಿ (18ಕ್ಕೆ 2) ಮತ್ತು 1 ವಿಕೆಟ್ ರವೀಂದ್ರ ಜಡೇಜ ಖಾತೆಗೆ ಸೇರ್ಪಡೆಗೊಂಡಿತು.
ಭಾರತ ಈ ಪಂದ್ಯದಲ್ಲಿ ಇಬ್ಬರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿತ್ತು. ವೇಗಿ ಶಮಿ ತನ್ನ ಆಯ್ಕೆಗೆ ನ್ಯಾಯ ಒದಗಿಸಿದರು. ಅಶ್ವಿನ್ ಎರಡನೆ ಇನಿಂಗ್ಸ್‌ನಲ್ಲಿ 132ಕ್ಕೆ 6 ವಿಕೆಟ್ ಮತ್ತು ಮೊದಲ ಇನಿಂಗ್ಸ್‌ನಲ್ಲಿ 93ಕ್ಕೆ 4 ವಿಕೆಟ್ ಪಡೆದಿದ್ದರು. ಅಶ್ವಿನ್ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 10 ವಿಕೆಟ್ ಪಡೆದಿದ್ದರೂ, ಎರಡೂ ಇನಿಂಗ್ಸ್‌ಗಳಲ್ಲಿ 92 ರನ್(42+50) ಮತ್ತು 6 ವಿಕೆಟ್(5+1) ಪಡೆದ ಆಲ್‌ರೌಂಡರ್ ರವೀಂದ್ರ ಜಡೇಜ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆರಂಭದಲ್ಲಿ ಪ್ರತಿರೋಧ: ನಾಲ್ಕನೆ ದಿನದಾಟದಂತ್ಯಕ್ಕೆ ನ್ಯೂಝಿಲೆಂಡ್ 37 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 93 ರನ್ ಗಳಿಸಿತ್ತು. ಅಂತಿಮ ದಿನ ಗೆಲುವಿಗೆ 341 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು.
38 ರನ್ ಗಳಿಸಿದ್ದ ಲ್ಯುಕ್ ರೊಂಚಿ ಮತ್ತು 8 ರನ್ ಗಳಿಸಿದ್ದ ಸ್ಯಾಂಟ್ನೆರ್ ಬ್ಯಾಟಿಂಗ್ ಮುಂದುವರಿಸಿ ಭಾರತದ ಬೌಲರ್‌ಗಳನ್ನು ಆರಂಭದಲ್ಲಿ ಚೆನ್ನಾಗಿ ದಂಡಿಸಿದರು. ಒಂದು ಗಂಟೆ ಕಾಲ ಭಾರತಕ್ಕೆ ಯಶಸ್ಸು ಸಿಗಲಿಲ್ಲ.
ಐದನೆ ವಿಕೆಟ್‌ಗೆ ಇವರು 102 ರನ್‌ಗಳ ಜೊತೆಯಾಟ ನೀಡಿದರು. 57.4ನೆ ಓವರ್‌ನಲ್ಲಿ ಲ್ಯೂಕ್ ರೊಂಚಿ ಅವರು ರವೀಂದ್ರ ಜಡೇಜ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ನ್ಯೂಝಿಲೆಂಡ್‌ನ ಸೋಲು ತಪ್ಪಿಸುವ ಹೋರಾಟ ಬಹುತೇಕ ಅಂತ್ಯಗೊಂಡಿತ್ತು. 138 ನಿಮಿಷಗಳ ಬ್ಯಾಟಿಂಗ್‌ನಲ್ಲಿ ರೊಂಚಿ 80 ರನ್(120ಎ, 9ಬೌ,1ಸಿ) ಗಳಿಸಿದರು.
ಸ್ಯಾಂಟ್ನೆರ್‌ಗೆ ವಿಕೆಟ್ ಕೀಪರ್ ವಾಟ್ಲಿಂಗ್ ಜೊತೆಯಾದರು. ಇವರು ಬ್ಯಾಟಿಂಗ್ ಮುಂದುವರಿಸಿ 68 ಓವರ್‌ಗಳಲ್ಲಿ 194ಕ್ಕೆ ತಲುಪಿಸಿದರು. ಅಷ್ಟರಲ್ಲಿ ವಾಟ್ಲಿಂಗ್ ಅವರನ್ನು ಶಮಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಮತ್ತೆ ತಂಡದ ಖಾತೆಗೆ ಎರಡು ರನ್ ಸೇರುವಷ್ಟರಲ್ಲಿ ಶಮಿ ಅವರ ಎಸೆತದಲ್ಲಿ ಕ್ರೆಗ್(1) ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
79.2 ಓವರ್‌ನಲ್ಲಿ ಏಕಾಂಗಿಯಾಗಿ ಗುಡುಗುತ್ತಿದ್ದ ಸ್ಯಾಂಟ್ನೆರ್ ಅವರು ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. 83.3ನೆ ಓವರ್‌ನಲ್ಲಿ ಐಶ್ ಸೋಧಿ 17 ರನ್ ಗಳಿಸಿ ಅಶ್ವಿನ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. 87.3ನೆ ಓವರ್‌ನಲ್ಲಿ ಅಶ್ವಿನ್ ಅವರು ವ್ಯಾಗ್ನೆರ್ (0)ವಿಕೆಟ್ ಉಡಾಯಿಸಿ ನ್ಯೂಝಿಲೆಂಡ್‌ನ್ನು ಆಲೌಟ್ ಮಾಡಿದರು. ಟ್ರೆಂಟ್ ಬೌಲ್ಟ್ ಔಟಾಗದೆ 2 ರನ್ ಗಳಿಸಿದರು.
ನಂಬರ್ ಗೇಮ್
*130: ಭಾರತ ಮೊದಲ ಟೆಸ್ಟ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಗೆಲುವಿನೊಂದಿಗೆ ಆಡಿರುವ 500 ಟೆಸ್ಟ್‌ಗಳಲ್ಲಿ 130ನೆ ಗೆಲುವು ದಾಖಲಿಸಿದೆ. ತವರಲ್ಲಿ ನಡೆದ 249 ಟೆಸ್ಟ್‌ಗಳಲ್ಲಿ 88ನೆ ಜಯ. ಕಾನ್ಪುರದಲ್ಲಿ 22 ಟೆಸ್ಟ್‌ಗಳಲ್ಲಿ 7ನೆ, ನ್ಯೂಝಿಲೆಂಡ್ ವಿರುದ್ಧ 55 ಟೆಸ್ಟ್‌ಗಳಲ್ಲಿ 19ನೆ ಗೆಲುವು ದಾಖಲಿಸಿದೆ.
*1,193: ಒಂದೂ ಶತಕ ದಾಖಲಾಗದೆ ಟೆಸ್ಟ್‌ನಲ್ಲಿ 1,193 ರನ್ ಜಮೆಯಾಗಿದೆ.
*50: ನ್ಯೂಝಿಲೆಂಡ್ ಪರ 1988ರ ಬಳಿಕ ಸ್ಯಾಂಟ್ನೆರ್ 50ಕ್ಕಿಂತ ಹೆಚ್ಚು ರನ್ ಮತ್ತು 5 ವಿಕೆಟ್ ಪಡೆದ ಕಿವೀಸ್‌ನ ಮೊದಲ ಆಟಗಾರ.
*286: ಸ್ಯಾಂಟ್ನೆರ್ 286 ಎಸೆತಗಳನ್ನು ಎದುರಿಸಿದ್ದರು.
*10: ಶತಕವಿಲ್ಲದೆ 10ಅರ್ಧಶತಕಗಳು ದಾಖಲಾಗಿವೆ.
*10: ಅಶ್ವಿನ್ ಐದನೆ ಬಾರಿ ಟೆಸ್ಟ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ.
*04: ರಾಸ್ ಟೇಲರ್ ಈ ಟೆಸ್ಟ್‌ನಲ್ಲಿ 4 ಕ್ಯಾಚ್ ಪಡೆದಿದ್ದಾರೆ.
* 01: ರವೀಂದ್ರ ಜಡೇಜ ನ್ಯೂಝಿಲೆಂಡ್ ವಿರುದ್ಧ ತವರಲ್ಲಿ ಅರ್ಧಶತಕ ಮತ್ತು ಐದು ವಿಕೆಟ್ ಪಡೆದ ಭಾರತದ ಮೊದಲ ಬೌಲರ್. ಜಾವಗಲ್ ಶ್ರೀನಾಥ್ 1999ರಲ್ಲಿ ಆಕ್ಲೆಂಡ್‌ನಲ್ಲಿ ಈ ಸಾಧನೆ ಮಾಡಿದ್ದರು.
*50: ಮಾರ್ಕ್ ಕ್ರೆಗ್ ಅವರು ಕೊಹ್ಲಿ ವಿಕೆಟ್ ಉಡಾಯಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಪಡೆದಿರುವ ವಿಕೆಟ್‌ಗಳ ಸಂಖ್ಯೆಯನ್ನು 50ಕ್ಕೆ ಏರಿಸಿದ್ದಾರೆ.
*245: ಪೂಜಾರ ಮತ್ತು ವಿಜಯ್ ಈ ಟೆಸ್ಟ್‌ನಲ್ಲಿ 245 ರನ್ ದಾಖಲಿಸಿದ್ದಾರೆ.
*04: ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ದಾಖಲಿಸಿದ ಭಾರತದ ನಾಲ್ಕನೆ ಆರಂಭಿಕ ದಾಂಡಿಗ ಮುರಳಿ ವಿಜಯ್.
*06: ಭಾರತ ಟೆಸ್ಟ್‌ನಲ್ಲಿ ಎರಡನೆ ಬಾರಿ ಆರು ದಾಂಡಿಗರನ್ನು ಎಲ್‌ಬಿಡಬ್ಲು ಬಲೆಗೆ ಕೆಡವಿತ್ತು.
*56: ಜಡೇಜ ಏಶ್ಯದಲ್ಲಿ ಟೆಸ್ಟ್‌ಗಳಲ್ಲಿ 16.35 ಸರಾಸರಿಯೊಂದಿಗೆ 56 ವಿಕೆಟ್ ಪಡೆದಿದ್ದಾರೆ.
*6: ವಿಲಿಯಮ್ಸನ್ ಮತ್ತು ಲಥಾಮ್ 6ನೆ ಬಾರಿ ಶತಕದ ಜೊತೆಯಾಟ ನೀಡಿದ್ದಾರೆ.
ಸ್ಕೋರ್ ವಿವರ
ಭಾರತ ಪ್ರಥಮ ಇನಿಂಗ್ಸ್: 318 ರನ್‌ಗೆ ಆಲೌಟ್
ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 262 ರನ್‌ಗೆ ಆಲೌಟ್
ಭಾರತ ದ್ವಿತೀಯ ಇನಿಂಗ್ಸ್: 107.2 ಓವರ್‌ಗಳಲ್ಲಿ 377/5 ಡಿಕ್ಲೇರ್
ನ್ಯೂಝಿಲೆಂಡ್ ದ್ವಿತೀಯ ಇನಿಂಗ್ಸ್: 87.3 ಓವರ್‌ಗಳಲ್ಲಿ 236/10
ಲಥಾಮ್ ಎಲ್‌ಬಿಡಬ್ಲು ಅಶ್ವಿನ್ 02
ಗಪ್ಟಿಲ್ ಸಿ ವಿಜಯ್ ಬಿ ಅಶ್ವಿನ್ 00
ವಿಲಿಯಮ್ಸನ್ ಎಲ್‌ಬಿಡಬ್ಲು ಅಶ್ವಿನ್ 25
ರಾಸ್ ಟೇಲರ್ ರನೌಟ್ 17
ರೊಂಚಿ ಸಿ ಅಶ್ವಿನ್ ಬಿ ಜಡೇಜ 80
ಸ್ಯಾಂಟ್ನರ್ ಸಿ ಶರ್ಮ ಬಿ ಅಶ್ವಿನ್ 71
ವ್ಯಾಟ್ಲಿಂಗ್ ಎಲ್‌ಬಿಡಬ್ಲು ಶಮಿ 18
ಕ್ರೆಗ್ ಬಿ ಶಮಿ 01
ಸೋಧಿ ಬಿ ಅಶ್ವಿನ್ 17
ಟಿಮ್ ಬೌಲ್ಟ್ ಔಟಾಗದೆ 02
ವಾಗ್ನರ್ ಎಲ್‌ಬಿಡಬ್ಲು ಅಶ್ವಿನ್ 00
ಇತರ 03
ವಿಕೆಟ್ ಪತನ: 1-2, 2-3, 3-43, 4-56, 5-158, 6-194, 7-196, 8-223, 9-236, 10-236.
ಬೌಲಿಂಗ್ ವಿವರ
ಮುಹಮ್ಮದ್ ಶಮಿ 8-2-18-2
ಅಶ್ವಿನ್ 35.3-5-132-6
ರವೀಂದ್ರ ಜಡೇಜ 34-17-58-1
ಉಮೇಶ್ ಯಾದವ್ 8-1-23-0
ವಿಜಯ್ 2-0-3-0.
ಪಂದ್ಯಶ್ರೇಷ್ಠ: ರವೀಂದ್ರ ಜಡೇಜ.







