ಎಐಸಿಯು ಅಧ್ಯಕ್ಷರಾಗಿ ಲ್ಯಾನ್ಸಿ ಡಿಕುನ್ನಾ ಆಯ್ಕೆ: ಸ್ವಾಗತ

ಮಂಗಳೂರು, ಸೆ.26: ಆಲ್ ಇಂಡಿಯ ಕೆಥೊಲಿಕ್ ಯೂನಿಯನ್ ರಾಷ್ಟ್ರೀಯ ಅಧ್ಯಕ್ಷರಾಗಿ ಲ್ಯಾನ್ಸಿ ಡಿಕುನ್ಹಾ ಬೊಂದೇಲ್ ಆಯ್ಕೆಯಾಗಿ ಸೋಮವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದರು. ಈ ಸಂದರ್ಭ ಮಂಗಳೂರು ಪ್ರದೇಶ ಕೆಥೊಲಿಕ್ ಸಭಾ ಪದಾಧಿಕಾರಿಗಳು ಅದ್ಧೂರಿ ಸ್ವಾಗತ ನೀಡಿದರು.
ಎಐಸಿಯು ಅಧ್ಯಕ್ಷ ಚುನಾವಣೆ ಕೊಲ್ಕತ್ತಾದಲ್ಲಿ ನಡೆದಿದ್ದು, ಚುನಾವಣೆಯಲ್ಲಿ ಲ್ಯಾನ್ಸಿ ಡಿಕುನ್ಹಾ ಹಾಗೂ ಮುಂಬಾಯಿಯ ಗೋರ್ಡನ್ ಡಿಸೋಜ ಸ್ಪರ್ಧಿಸಿದ್ದರು. ಭಾರತದಾದ್ಯಂತ 30 ರಾಜ್ಯಗಳಲ್ಲಿ ಯೂನಿಯನ್‌ಗಳಿದ್ದು ನಿರ್ದಿಷ್ಟ ಸದಸ್ಯರಿಗೆ ಮತ ಚಲಾಯಿಸುವ ಅಧಿಕಾರವಿದೆ. 200 ಸದಸ್ಯರು ಮತದಾನದ ಹಕ್ಕು ಹೊಂದಿದ್ದು 182 ಸದಸ್ಯರು ಮತ ಚಲಾಯಿಸಿದ್ದರು. ಲ್ಯಾನಿ ಅವರು 145 ಮತಗಳನ್ನು ಪಡೆಯುವ ಮುಖಾಂತರ ಭರ್ಜರಿ ವಿಜಯ ಸಾಧಿಸಿದರು.30 ವರ್ಷಗಳ ಬಳಿಕ ದಕ್ಷಿಣ ಭಾರತಕ್ಕೆ ಎಐಸಿಎಯು ಅಧ್ಯಕ್ಷ ಸ್ಥಾನ ಲಭಿಸಿದಂತಾಗಿದೆ. ಸಂಘಕ್ಕೆ 97 ವರ್ಷಗಳಾಗಿದ್ದು ಗೋವಾದಲ್ಲಿ ಮುಖ್ಯ ಕಚೇರಿ ಹೊಂದಿದೆ. ವಿವಿಧ ರಾಜ್ಯಗಳಲ್ಲಿ ಸಮಿತಿ ಸಭೆ ನಡೆಯುತ್ತದೆ. ಅವರು ಇದುವರೆಗೆ ಎಐಸಿಯು ಉಪಾಧ್ಯಕ್ಷರಾಗಿದ್ದರು.
ಸೋಮವಾರ ನೂತನ ಅಧ್ಯಕ್ಷರು ಮಂಗಳೂರಿಗೆ ಆಗಮಿಸಿದಾಗ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷೆ ಪ್ಲೇವಿ ಡಿಸೋಜ, ನಿಯೋಜಿತ ಅಧ್ಯಕ್ಷ ವಲೇರಿಯನ್ ಡಿಸೋಜ, ದಕ್ಷಿಣ ವಲಯಾಧ್ಯಕ್ಷ ವಿನ್ಸೆಂಟ್ ಡಿಸೋಜ, ಕಾರ್ಯದರ್ಶಿ ಫೆಲಿಕ್ಸ್ ಡಿಸೋಜ, ಪದಾಧಿಕಾರಿ ಲವೀನಾ ದಾಂತಿ ಸಹಿತ ವಿವಿಧ ಘಟಕಗಳ ಪದಾಧಿಕಾರಿಗಳು ಸ್ವಾಗತಿಸಿದರು.





