ಮನಪಾ ಆಡಳಿತ ವಿಭಜನೆಗೆ ಒಪ್ಪಿಗೆ!
ಅಕ್ಟೋಬರ್ 15ರಿಂದ ವಲಯ ಕಚೇರಿಗಳ ಕಾರ್ಯಾರಂಭ

ಮಂಗಳೂರು, ಸೆ.26: ಅಡಳಿತ ವಿಕೇಂದ್ರೀಕರಣದ ಮೂಲಕ ಜನಸಾಮಾನ್ಯರಿಗೆ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಹಾನಗರಪಾಲಿಕೆಯ ಆಡಳಿತವನ್ನು ಮೂರು ವಲಯಗಳಾಗಿ ವಿಭಜಿಸುವ ನಿರ್ಣಯವನ್ನು ಮಂಗಳೂರು ಮಹಾನಗರ ಪಾಲಿಕೆ ಕೈಗೊಂಡಿದೆ. ಪಾಲಿಕೆಯ ನೂತನ ವಲಯ ಕಚೇರಿಗಳು ಅಕ್ಟೋಬರ್ 15ರಿಂದ ಕಾರ್ಯಾರಂಭಿಸಲಿವೆ.
ಈ ಬಗ್ಗೆ ಇಂದು ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸುರತ್ಕಲ್‌ನಲ್ಲಿರುವ ಪಾಲಿಕೆ ಉಪ ಕಚೇರಿ ವಲಯ 1 ಆಗಿ, ಲಾಲ್‌ಬಾಗ್‌ನ ಕೇಂದ್ರ ಕಚೇರಿ ವಲಯ 2 ಆಗಿ ಹಾಗೂ ಕದ್ರಿಯನ್ನು ವಲಯ 3 ಆಗಿ ವಿಂಗಡಿಸಿ ವಿಶೇಷ ಸಭೆ ಅನುಮೋದಿಸಿತು. ಪ್ರಸ್ತುತ ಸುರತ್ಕಲ್‌ನಲ್ಲಿರುವ ಪಾಲಿಕೆ ಉಪ ಕಚೇರಿಯನ್ನು ವಲಯ 1ರ ಕಚೇರಿಯನ್ನಾಗಿ ಮುಂದುವರಿಸಲು ನಿರ್ಧರಿಸಲಾಯಿತು. ಆಡಳಿತ ಪಕ್ಷದ ಕೆಲ ಸದಸ್ಯರು ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರ ಆಕ್ಷೇಪದ ಹಿನ್ನೆಲೆಯಲ್ಲಿ ಕದ್ರಿಗೆ ಸ್ಥಳಾಂತರಗೊಳ್ಳಬೇಕಿದ್ದ ವಲಯ 3ರ ಕಚೇರಿಯನ್ನು ವಲಯ 2ರ ಜತೆಯಲ್ಲಿ ಮನಪಾ ಕೇಂದ್ರ ಕಚೇರಿಯಲ್ಲೇ ತೆರೆಯಲು ನಿರ್ಣಯಿಸಲಾಯಿತು.
ವಲಯ ರಚನೆ ಕುರಿತು ಪರಿಷ್ಕೃತ ಪಟ್ಟಿಯನ್ನು ಅನುಮೋದನೆಗಾಗಿ ಮೇಯರ್ ಹರಿನಾಥ್ ಅವರು ಪರಿಷತ್ ಸಭೆಯಲ್ಲಿ ಮಂಡಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರಾದ ಭಾಸ್ಕರ ಮೊಯ್ಲಿ ಮಾತನಾಡಿ, ಪಾಲಿಕೆಯಲ್ಲಿ ಅಣ್ಛಕಾರಿಗಳ ಹಾಗೂ ಸಿಬ್ಬಂದಿಗಳ ಕೊರತೆ ಇದೆ. ಈ ಕೊರತೆ ನೀಗಿಸಿದ ಬಳಿಕವಷ್ಟೆ ವಲಯ ಕಚೇರಿಗಳನ್ನು ಆರಂಭಿಸಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿ ನವೀನ್ ಡಿ ಸೋಜ, ಮಹಾಬಲ ಮಾರ್ಲ, ಸುಧೀರ್ ಶೆಟ್ಟಿ ಕಣ್ಣೂರು, ಡಿ.ಕೆ. ಅಶೋಕ್ ಕುಮಾರ್, ರಾಜೇಶ್ ಮೊದಲಾದರು ಅಭಿಪ್ರಾಯ ಮಂಡಿಸಿದರು.
ಶಾಸಕ ಮೊಯ್ದೀನ್ ಬಾವ ಮಾತನಾಡಿ, ಪ್ರತಿಯೊಬ್ಬ ಸದಸ್ಯರ ಅಭಿಪ್ರಾಯವನ್ನು ಕೇಳೋಣ. ಸಿಬ್ಬಂದಿ ಕೊರತೆ ಕುರಿತು ನಗರಾಭಿವೃದ್ಧಿ ಸಚಿವ ಜತೆ ಮಾತನಾಡಿದ್ದೇನೆ. ವಲಯ ಕಚೇರಿಗೆ ನರ್ಮ್ ಬಸ್ ವ್ಯವಸ್ಥೆಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದೇನೆ. ತಕ್ಕ ವ್ಯವಸ್ಥೆ ಮಾಡಲಾಗುವುದು ಎಂದರು.
ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ, ಪಾಲಿಕೆಯ ಆಡಳಿತವನ್ನು ವಿಕೇಂದ್ರೀಕರಣ ಮಾಡಬೇಕೆಂಬ ನಗರಾಭಿವೃದ್ಧಿ ಇಲಾಖೆಯ ನಿರ್ದೇಶನದಂತೆ ಮೂರು ವಲಯ ಕಚೇರಿಗಳನ್ನು ಆರಂಭಿಸಲಾಗುತ್ತಿದೆ. ಈಗ ಇರುವ ಸಿಬ್ಬಂದಿಯನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡಿದರೆ ಹೆಚ್ಚಿನ ಸಮಸ್ಯೆ ಆಗುವುದಿಲ್ಲ. ಕರ್ನಾಟಕ ನಗರಾಡಳಿತ ಕಾಯ್ದೆಯ ಪ್ರಕಾರ ಪಾಲಿಕೆ ಆಯುಕ್ತರು ವಿವೇಚನೆ ಬಳಸಿ ವಲಯ ಆಯುಕ್ತರಿಗೆ ಅಧಿಕಾರ ಹಂಚಿಕೆ ಮಾಡಲು ಅವಕಾಶವಿದೆ ಎಂದರು.
500 ಚದರ ಮೀಟರ್ ವಿಸ್ತೀರ್ಣದವರೆಗಿನ ಕಟ್ಟಡಗಳ ಆವರಣ ಗೋಡೆಗೆ ಪರವಾನಗಿ ಮತ್ತು ಕಾಮಗಾರಿ ಪೂರ್ಣಗೊಂಡ ಬಗ್ಗೆ ಪ್ರಮಾಣ ಪತ್ರ ನೀಡುವುದು, ನಕ್ಷೆ ಮತ್ತು ವಲಯ ನಿಯಮಗಳ ಉಲ್ಲಂಘನೆ ಸಂಬಂಧ ನೋಟಿಸ್ ಜಾರಿ ಮಾಡುವ ಅಧಿಕಾರವನ್ನು ವಲಯ ಕಚೇರಿಗಳಿಗೆ ನೀಡಲಾಗುವುದು. ರೂ. 50 ಲಕ್ಷದವರೆಗಿನ ಮೌಲ್ಯದ ಆಸ್ತಿಗಳ ಖಾತಾ ನೋಂದಣಿ, ಖಾತಾ ಬದಲಾವಣೆ, ದಾಖಲೆಗಳನ್ನು ನೀಡುವ ಅಧಿಕಾರ ಕಂದಾಯ ಅಧಿಕಾರಿಗಳಿಗೆ ಲಭ್ಯವಾಗಲಿದೆ. ರೂ. 50 ಲಕ್ಷದಿಂದ ರೂ. 1 ಕೋಟಿವರೆಗಿನ ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳ ಶಿಫಾರಸು ಆಧರಿಸಿ ವಲಯ ಆಯುಕ್ತರು ಈ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದು ವಿವರಿಸಿದರು.
2,500 ಚದರ ಅಡಿವರೆಗಿನ ಕಟ್ಟಡಗಳಿಗೆ ಸಂಖ್ಯೆ ನೀಡುವುದು, ಕರಪತ್ರ, ಫ್ಲೆಕ್ಸ್ , ಬ್ಯಾನರ್‌ಗಳನ್ನು ತೆರವು ಮಾಡುವುದು, 200 ಚದರ ಅಡಿಗಳವರೆಗಿನ ವಿಸ್ತೀರ್ಣದ ಉದ್ದಿಮೆ ಅಥವಾ ಕೈಗಾರಿಕೆಗಳಿಗೆ ಪರವಾನಗಿ ನೀಡುವುದು, ತುರ್ತು ಸಂದರ್ಭಗಳಲ್ಲಿ ಕಾಮಗಾರಿ ಕೈಗೊಳ್ಳುವುದು, ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಮಾಡುವುದು, ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ನಡೆಸುವುದು ಸೇರಿದಂತೆ ಹಲವು ಕೆಲಸಗಳನ್ನು ವಲಯ ಕಚೇರಿಗಳ ಮೂಲಕವೇ ನಿರ್ವಹಿಸಲಾಗುವುದು ಎಂದವರು ಹೇಳಿದರು.
ಮಂಗಳೂರು ವನ್ ಅವ್ಯವಹಾರದ ತನಿಖೆಯಲ್ಲಿ ವಿಳಂಬ
ಆಕ್ಷೇಪ ಪಾಲಿಕೆಯ ಮಂಗಳೂರು ವನ್‌ನಲ್ಲಿ ಒಂದೂವರೆ ವರ್ಷಗಳ ಹಿಂದೆ ನಡೆದ ಹಣ ದುರುಪಯೋಗದ ಕುರಿತು ಇದುವರೆಗೆ ತನಿಖೆ ನಡೆದಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಮಹಾಬಲ ಮಾರ್ಲ ಅಸಮಾಧಾನ ವ್ಯಕ್ತಪಡಿಸಿದರು.
ಉಪ ಮೇಯರ್ ಸಮಿತ್ರಾ ಕರಿಯ, ಪಾಲಿಕೆ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಸನಿಲ್, ಅಪ್ಪಿಲತಾ, ಲ್ಯಾನ್ಸಿ ಲೋಟ್, ಬಶೀರ್ ಉಪಸ್ಥಿತರಿದ್ದರು.
ವಲಯವಾರು ವಾರ್ಡ್‌ಗಳ ವಿವರ
ವಲಯ 1 (ಸುರತ್ಕಲ್)
ಸುರತ್ಕಲ್‌ಪಶ್ಚಿಮ, ಸುರತ್ಕಲ್ಪೂರ್ವ, ಕಾಟಿಪಳ್ಳಪೂರ್ವ, ಕಾಟಿಪಳ್ಳ ಕೃಷ್ಣಾಪುರ, ಕಾಟಿಪಳ್ಳ ಉತ್ತರ, ಇಡ್ಯಾ ಪೂರ್ವ, ಇಡ್ಯಾ ಪಶ್ಚಿಮ, ಹೊಸಬೆಟ್ಟು, ಕುಳಾಯಿ, ಬೈಕಂಪಾಡಿ, ಪಣಂಬೂರು, ಬೆಂಗ್ರೆ. ಒಟ್ಟು 108052 ಜನಸಂಖ್ಯೆ ಹೊಂದಿದ ವಲಯ 1ರ ವ್ಯಾಪ್ತಿಗೆ ಒಟ್ಟು 12 ವಾರ್ಡ್‌ಗಳು ಬರಲಿವೆ.
ವಲಯ 2 (ಕೇಂದ್ರ ಕಚೇರಿ)
ಪಂಜಿಮೊಗರು, ಕುಂಜತ್ತಬೈಲ್ ಉತ್ತರ, ಕುಂಜತ್ತಬೈಲ್ ದಕ್ಷಿಣ, ಮರಕಡ, ಬಂಗ್ರಕೂಳೂರು, ದೇರೆಬೈಲು ಉತ್ತರ, ಕಾವೂರು, ದೇರೆಬೈಲು ದಕ್ಷಿಣ, ದೇರೆಬೈಲು ಪಶ್ಚಿಮ, ದೇರೆಬೈಲು ದಕ್ಷಿಣ ಪಶ್ಚಿಮ, ಬೋಳೂರು, ಮಣ್ಣಗುಡ್ಡ, ಕಂಬಳ, ಕೊಡಿಯಾಲ್‌ಬೈಲ್, ಬಿಜೈ, ಫಳ್ನೀರು, ಕೋರ್ಟ್, ಕೇಂದ್ರ ಮಾರುಕಟ್ಟೆ, ಡೊಂಗರಕೇರಿ, ಕುದ್ರೋಳಿ, ಬಂದರು, ಪೋರ್ಟು, ಕಂಟೋನ್‌ಮೆಂಟ್, ಮಿಲಾಗ್ರಿಸ್, ಅತ್ತಾವರ, ಮಂಗಳಾದೇವಿ, ಹೊಯಿಗೆಬಜಾರ್, ಬೋಳಾರ. ಒಟ್ಟು 28 ವಾರ್ಡ್‌ಗಳು ವಲಯ 2ರ ವ್ಯಾಪ್ತಿಗೆ ಸೇರಲಿದ್ದು, 218209 ಜನಸಂಖ್ಯೆಯನ್ನು ಹೊಂದಿದೆ.
ವಲಯ 3 (ಕದ್ರಿ)
ಪಚ್ಚನಾಡಿ, ತಿರುವೈಲ್, ಪದವು ಪಶ್ಚಿಮ, ಕದ್ರಿ ಪದವು, ದೇರೆಬೈಲು ಪೂರ್ವ, ಕದ್ರಿ ಉತ್ತರ, ಕದ್ರಿ ದಕ್ಷಿಣ, ಶಿವಭಾಗ್, ಪದವು ಸೆಂಟ್ರಲ್, ಪದವು ಪೂರ್ವ, ಮರೋಳಿ, ಬೆಂದೂರು, ಕಂಕನಾಡಿ ವೆಲೆನ್ಸಿಯಾ, ಕಂಕನಾಡಿ, ಅಳಪೆ ದಕ್ಷಿಣ, ಅಳಪೆ ಉತ್ತರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಜೆಪ್ಪು. ಈ ವಲಯದಲ್ಲಿ 20 ವಾರ್ಡ್‌ಗಳು ಸೇರಿದ್ದು, ಒಟ್ಟು 162707 ಜನಸಂಖ್ಯೆಯನ್ನು ಹೊಂದಿದೆ.
3 ಹಂತದಲ್ಲಿ ಸಂಪೂರ್ಣ ಗಣಕೀಕರಣ ಪಾಲಿಕೆ ಕಚೇರಿ ಮತ್ತು ವಲಯ ಕಚೇರಿಗಳನ್ನು ಸಂಪೂರ್ಣ ಗಣಕೀಕರಣಗೊಳಿಸುವ ನಿಟ್ಟಿನಲ್ಲಿ ಕಿಯೋನಿಕ್ಸ್ ಸಂಸ್ಥೆಗೆ 3.39 ಕೋಟಿ ರೂ. ವೆಚ್ಚದಲ್ಲಿನ ಟೆಂಡರ್ ನೀಡಲಾಗಿದೆ. ಈ ಪ್ರಕ್ರಿಯೆ ಮೂರು ಹಂತದಲ್ಲಿ ನಡೆಯಲಿದೆ. ಈ ಮೂಲಕ ಪಾಲಿಕೆ ಆಡಳಿತವನ್ನು ಸಂಪೂರ್ಣ ಕಾಗದ ರಹಿತ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ವಿಶೇಷ ಸಭೆಯಲ್ಲಿ ತಿಳಿಸಿದರು.







