ರಾಹುಲ್ ಗಾಂಧಿಯತ್ತ ಎಸೆದ 'ಶೂ ' ಜಿತಿನ್ ಪ್ರಸಾದ್‌ಗೆ ಬಡಿಯಿತು ..!

ಸಿತಾಪುರ, ಸೆ.26: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಯೊಬ್ಬ ಶೂ ಎಸೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಆದರೆ ಶೂ ಅವರ ಮೇಲೆ ಬೀಳದೆ ಮಾಜಿ ಸಚಿವ ಜಿತಿನ್ ಪ್ರಸಾದ್ ಮೇಲೆ ಬಿದ್ದಿದೆ.
ಲಕ್ನೋದಿಂದ 85 ಕಿ.ಮೀ ದೂರದ ಸಿತಾಪುರದಲ್ಲಿ ರಾಹುಲ್ ಗಾಂಧಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದಾಗ ಅವರ ಮೇಲೆ ಶೂ ದಾಳಿ ದಾಳಿ ನಡೆದಿದೆ. ಆದರೆ ಶೂ ಅವರ ಮೇಲೆ ಬೀಳಲಿಲ್ಲ. ರಾಹುಲ್ ಅವರೊಂದಿಗೆ ವಾಹನದಲ್ಲಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಜಿತಿನ್ ಪ್ರಸಾದ್ ಅವರ ಮೇಲೆ ಬಿದ್ದಿದೆ.
ಶೂ ಎಸೆದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶೂ ಎಸೆದಾತನನ್ನು ಹರಿ ಓಂ ಮಿಶ್ರಾ ಎಂದು ಗುರುತಿಸಲಾಗಿದ್ದು, ತಾನು ಪತ್ರಕರ್ತನೆಂದು ಆತ ಹೇಳಿಕೊಳ್ಳುತ್ತಿದ್ದಾನೆ. ಪೊಲೀಸರು ಆತನನ್ನು ಹಿಡಿದು ವಿಚಾರಣೆ ನಡೆಸುತ್ತಿದ್ದಾರೆ. ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಆರ್ ಎಸ್‌ಎಸ್ ಮೇಲೆ ಹರಿ ಹಾಯ್ದರು. " ನಾನು ವಾಹನದಲ್ಲಿ ತೆರಳುತ್ತಿದ್ದಾಗ ನನ್ನತ್ತ ಶೂ ಎಸೆಯಲಾಯಿತು. ಆದರೆ ನನ್ನ ಮೇಲೆ ಶೂ ಬೀಳಲಿಲ್ಲ. ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಗೆ ಹೇಳುವುದೇನಂದರೆ ನನ್ನ ಮೇಲೆ ಒಂದಲ್ಲ ಹಲವು ಶೂಗಳನ್ನು ಎಸೆದರೂ, ನಾನು ನಿಮಗೆ ಹೆದರಲಾರೆ. ಪ್ರೀತಿ ಮತ್ತು ಸೌಹಾರ್ದತೆಯಲ್ಲಿ ಇಟ್ಟಿರುವ ನಂಬಿಕೆಯನ್ನು ಮುಂದುವರಿಸುವೆನು. ನೀವು ಬೇಕಾದರೆ ನನ್ನನ್ನು ದ್ವೇಷಿಸಬಹುದು” ಎಂದು ಹೇಳಿದ್ದಾರೆ.





