ರಕ್ತ ಮತ್ತು ನೀರು ಜೊತೆಯಾಗಿ ಹರಿಯಲು ಸಾಧ್ಯವಿಲ್ಲ: ಮೋದಿ
ಚೆನಾಬ್ ನದಿಗೆ ಅಣೆಕಟ್ಟು ನಿರ್ಮಾಣ

ಹೊಸದಿಲ್ಲಿ,ಸೆ.26: ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಆಕ್ರಮಣಕಾರಿ ಕಾರ್ಯತಂತ್ರವೊಂದನ್ನು ಕೈಗೊಳ್ಳುವ ನಿಟ್ಟಿನಲ್ಲಿ ವಿವಾದಾ ತ್ಮಕ ಚೆನಾಬ್ ಅಣೆಕಟ್ಟು ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಮತ್ತು ಆ ರಾಷ್ಟ್ರಕ್ಕೆ ಮೀಸಲಾಗಿರುವ ನದಿ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಭಾರತವು ಸೋಮವಾರ ನಿರ್ಧರಿಸಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು,ರಕ್ತ ಮತ್ತು ನೀರು ಜೊತೆ ಜೊತೆಯಾಗಿ ಹರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸರಕಾರದ ಈ ದಿಟ್ಟ ನಿರ್ಧಾರವು ವ್ಯಾಪಕ ಅಂತರರಾಷ್ಟ್ರೀಯ ಪರಿಣಾಮಗಳನ್ನು ಬೀರುವ ನಿರೀಕ್ಷೆಯಿದೆ.
ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ 1960ರ ಸಿಂಧು ಜಲ ಒಪ್ಪಂದದಡಿ ಪಾಕಿಸ್ತಾನಕ್ಕೆ ಹಂಚಿಕೆಯಾಗಿರುವ ಸಿಂಧು, ಚೆನಾಬ್ ಮತ್ತು ಝೇಲಂ ನದಿಗಳ ನೀರಿನ ಆಂತರಿಕ ಬಳಕೆಯನ್ನು ಹೆಚ್ಚಿಸಲು ಸರಕಾರವು ನಿರ್ಧರಿಸಿತು.
ಕಾಶ್ಮೀರದ ಉರಿಯಲ್ಲಿ 18 ಯೋಧರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಸಿಂಧು ಜಲ ಒಪ್ಪಂದವನ್ನು ರದ್ದುಗೊಳಿಸಿ ಪಾಕಿಸ್ತಾನಕ್ಕೆ ಪಾಠ ಕಲಿಸುವಂತೆ ಹೆಚ್ಚುತ್ತಿರುವ ಆಗ್ರಹದ ಮಧ್ಯೆಯೇ ನಡೆದ ಸಭೆಯಲ್ಲಿ ಮೋದಿ ಅವರು, ರಕ್ತ ಮತ್ತು ನೀರು ಜೊತೆ ಜೊತೆಯಾಗಿ ಹರಿಯಲು ಸಾಧ್ಯವಿಲ್ಲ ಎಂದು ಘೋಷಿಸಿದರು.
ಸಿಂಧು ಜಲ ಒಪ್ಪಂದವು ವಿಶ್ವದಲ್ಲಿಯೇ ಅತ್ಯಂತ ಉದಾರವಾದ ನದಿ ನೀರು ಹಂಚಿಕೆ ಒಪ್ಪಂದವೆಂದು ಪರಿಗಣಿತವಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಮೂರು ಯುದ್ಧಗಳು ಮತ್ತು ಅಸಂಖ್ಯಾತ ಘರ್ಷಣೆಗಳು ನಡೆದಿದ್ದರೂ ಈ ಒಪ್ಪಂದಕ್ಕೆ ಯಾವುದೇ ಧಕ್ಕೆಯುಂ ಟಾಗಿಲ್ಲ.
ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ರೂಪುಗೊಂಡ ಈ ಒಪ್ಪಂದವು ಬಿಯಾಸ್,ರಾವಿ ಮತ್ತು ಸಟ್ಲೆಜ್ ನದಿಗಳ ಮೇಲಿನ ನಿಯಂತ್ರಣವನ್ನು ಭಾರತಕ್ಕೆ ನೀಡಿದ್ದರೆ, ಇತರ ಮೂರು ನದಿಗಳಾದ ಚೆನಾಬ್,ಸಿಂಧು ಮತ್ತು ಝೇಲಂ ನದಿಗಳನ್ನು ಪಾಕಿಸ್ತಾನದ ಹಿಡಿತಕ್ಕೆ ಒಪ್ಪಿಸಿದೆ. ನದಿಗಳ ಕೆಳಪಾತ್ರದಲ್ಲಿರುವ ಪಾಕಿಸ್ತಾನಕ್ಕೆ ಭಾರತಕ್ಕೆ ದೊರೆಯುವ ನೀರಿನ ನಾಲ್ಕು ಪಟ್ಟು ಹೆಚ್ಚು ನೀರನ್ನು ನೀಡುವ ಮೂಲಕ ಇದು ಅತ್ಯಂತ ಉದಾರ ಒಪ್ಪಂದವಾಗಿದೆ.
ಚೆನಾಬ್ ನದಿಗೆ ಅಡ್ಡವಾಗಿ ತುಲ್ಬುಲ್ ಯೋಜನೆಯನ್ನು ಮುಂದುವರಿಸಲು ಸರಕಾ ರವು ಸಭೆಯಲ್ಲಿ ನಿರ್ಧರಿಸಿತು. ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ಸುದೀರ್ಘ ಪಂಚಾಯಿತಿ ಪ್ರಕ್ರಿಯೆಯ ಬಳಿಕ ಅಣೆಕಟ್ಟು ನಿರ್ಮಾಣಕ್ಕೆ ಭಾರತಕ್ಕೆ ಹಸಿರು ನಿಶಾನೆ ದೊರಕಿತ್ತಾದರೂ ಸೌಹಾರ್ದತೆಯ ಸಂಕೇತವಾಗಿ ಯೋಜನೆಯ ಅನುಷ್ಠಾನವನ್ನು ತಡೆಹಿಡಿದಿತ್ತು.





