‘ರಸ್ತೆ ಸುರಕ್ಷಾ ಸಪ್ತಾಹ’ ರ್ಯಾಲಿಗೆ ಚಾಲನೆ

ಮಂಗಳೂರು, ಸೆ.26: ನಗರದ ಸಂಚಾರ ಒತ್ತಡ ನಿಯಂತ್ರಿಸುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ಟ್ರಾಫಿಕ್ ವಾರ್ಡನ್ ಸ್ಕ್ವಾಡ್’ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ‘ರಸ್ತೆ ಸುರಕ್ಷಾ ಸಪ್ತಾಹ’ ರ್ಯಾಲಿಗೆ ಡಿಸಿಪಿ (ಅಪರಾಧ ಮತ್ತು ಸಂಚಾರಿ) ಡಾ.ಸಂಜೀವ ಎಂ. ಪಾಟೀಲ್ ಇಂದು ಸಂಜೆ ಕಂಕನಾಡಿ ಬಸ್ಸು ನಿಲ್ದಾಣದ ಬಳಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಅಕ್ಟೋಬರ್ 2ರಂದು ಅಸ್ತಿತ್ವಕ್ಕೆ ಬಂದಿರುವ ‘ಟ್ರಾಫಿಕ್ ವಾರ್ಡನ್ ಸ್ಕ್ವಾಡ್’ಗೆ ಒಂದು ವರ್ಷ ತುಂಬುವ ಹಿನ್ನೆಲೆಯಲ್ಲಿ ಒಂದು ವಾರ ‘ರಸ್ತೆ ಸುರಕ್ಷಾ ಸಪ್ತಾಹ’ವನ್ನು ಹಮ್ಮಿಕೊಳ್ಳಲಾಗಿದೆ.
ಸಪ್ತಾಹದ ಅಂಗವಾಗಿ ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವುದು ಸಪ್ತಾಹದ ಉದ್ದೇಶವಾಗಿದೆ. ‘ಟ್ರಾಫಿಕ್ ವಾರ್ಡನ್ ಸ್ಕ್ವಾಡ್’ನವರು ಸ್ವಯಂ ಪ್ರೇರಿತವಾಗಿ ಆಸಕ್ತಿಯಿಂದ ನಗರದ ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸುತ್ತಿರುವುದು ಶ್ಲಾಘನೀಯ. ಇವರ ಸೇವೆಯಿಂದ ಟ್ರಾಫಿಕ್ ಸಿಬ್ಬಂದಿಗಳಿಗೆ ಒತ್ತಡ ಕಡಿಮೆಯಾಗಿದೆ ಎಂದರು.
ಟ್ರಾಫಿಕ್ ಉಪವಿಭಾಗದ ಎಸಿಪಿ ಕೆ.ತಿಲಕ್‌ಚಂದ್ರ, ‘ಟ್ರಾಫಿಕ್ ವಾರ್ಡನ್ ಸ್ಕ್ವಾಡ್’ ಮುಖ್ಯಸ್ಥ ಜೊ.ಗೊನ್ಸಾಲ್ವೆಸ್, ಸಂಚಾರಿ ಪೂರ್ವ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







