ಭಯೋತ್ಪಾದನೆ ಮೂಲಕ ಆಡಳಿತ ನಡೆಸುತ್ತಿರುವ ಪಾಕಿಸ್ತಾನ : ಅಮೆರಿಕದ ಸಂಸದ ಆರೋಪ

ವಾಶಿಂಗ್ಟನ್, ಸೆ. 26: ಪಾಕಿಸ್ತಾನವು ಭಯೋತ್ಪಾದನೆಯ ಮೂಲಕ ಆಡಳಿತ ನಡೆಸುತ್ತಿದೆ ಹಾಗೂ ದೇಶದಲ್ಲಿರುವ ಇತರ ಸಂಸ್ಕೃತಿಗಳನ್ನು ‘‘ಅಳಿಸಿ ಹಾಕಲು’’ ಉತ್ಸುಕವಾಗಿದೆ ಎಂದು ಅಮೆರಿಕದ ಪ್ರಭಾವಿ ಸಂಸದ ಬ್ರಾಡ್ ಶರ್ಮನ್ ಆರೋಪಿಸಿದ್ದಾರೆ.
ಪಾಕಿಸ್ತಾನವು ಇದನ್ನೇ ಮುಂದುವರಿಸಿದರೆ 1971ರಲ್ಲಿ ಅದು ಅನುಭವಿಸಿದ ವಿಭಜನೆಯಂಥ ಪರಿಸ್ಥಿತಿಗೆ ಮತ್ತೆ ತಲುಪಬಹುದು ಎಂದು ಅವರು ಎಚ್ಚರಿಸಿದ್ದಾರೆ. ‘‘ಭಯೋತ್ಪಾದನೆಯ ಮೂಲಕ ಇತರ ಸಂಸ್ಕೃತಿಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಾಶಪಡಿಸುವ ಮೂಲಕ ಪಾಕಿಸ್ತಾನವನ್ನು ಭದ್ರವಾಗಿ ಇಟ್ಟುಕೊಳ್ಳಬಹುದು ಎಂದು ಭಾವಿಸುವವರು ಒಮ್ಮೆ ಢಾಕಾಕ್ಕೆ ಭೇಟಿ ನೀಡಬೇಕು’’ ಎಂದು ಕಾಂಗ್ರೆಸ್ಸಿಗ ಹಾಗೂ ಏಶ್ಯ ಮತ್ತು ಪೆಸಿಫಿಕ್ ಕುರಿತ ಸದನ ವಿದೇಶ ವ್ಯವಹಾರಗಳ ಉಪ ಸಮಿತಿಯ ಸದಸ್ಯರೂ ಆಗಿರುವ ಶರ್ಮನ್ ಹೇಳಿದರು.
ಸಿಂಧಿ ಫೌಂಡೇಶನ್‌ನಲ್ಲಿ ಭಾಷಣ ಮಾಡಿದ ಅವರು, ಒಂದರ ನಂತರ ಒಂದರಂತೆ ಬಂದ ಸರಕಾರಗಳು, ಅದರಲ್ಲೂ ಮುಖ್ಯವಾಗಿ ಈಗಿನ ಸರಕಾರ, ಸಿಂಧಿಗಳ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಲು ಪ್ರಯತ್ನಿಸುತ್ತಿದೆ ಎಂದರು.





