ಉಡುಪಿ: ಸರಕಾರಿ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಸಿಪಿಐ ಪ್ರತಿಭಟನೆ

ಉಡುಪಿ, ಸೆ.26: ಉಡುಪಿ ಕೆ.ಎಂ.ಮಾರ್ಗದಲ್ಲಿ ಹಾಜಿ ಅಬ್ದುಲ್ಲ ಅವರು ದಾನವಾಗಿ ನೀಡಿರುವ ಜಾಗದಲ್ಲಿರುವ ಮಹಿಳಾ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸುವುದನ್ನು ವಿರೋಧಿಸಿ ಸಿಪಿಐ ಉಡುಪಿ ಜಿಲ್ಲಾ ಸಮಿತಿ ಸೋಮವಾರ ಉಡುಪಿ ತಾಲೂಕು ಕಚೇರಿಯ ಎದುರು ಧರಣಿ ನಡೆಸಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮನೋವೈದ್ಯ ಡಾ.ಪಿ.ವಿ. ಭಂಡಾರಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಕರಣ ಮಾಡಿದ ಯೋಜನೆಗಳೆಲ್ಲವೂ ವಿಫಲವಾಗಿವೆ. ಇದನ್ನು ಸರಕಾರವೇ ಒಪ್ಪಿಕೊಂಡಿದೆ. ಆದುದರಿಂದ ಈ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಒಪ್ಪಿಸಬಾರದು ಎಂದು ಆಗ್ರಹಿಸಿದರು.
ಇದನ್ನು ಖಾಸಗೀಕರಣಗೊಳಿಸುವ ಬದಲು ರಾಜ್ಯ ಸರಕಾರವೇ ದುರಸ್ತಿ ಮಾಡುವುದಕ್ಕಾಗಿ ಅದರ ವೆಚ್ಚದ ಬಗ್ಗೆ ತಜ್ಞರಿಂದ ಅಭಿಪ್ರಾಯ ಪಡೆಯ ಬೇಕು. ಅದರಂತೆ ಅನುದಾನ ಬಿಡುಗಡೆಗೊಳಿಸಿ ದುರಸ್ತಿ ಮಾಡಬೇಕು. ಇಲ್ಲವಾದರೆ ಕೇರಳ ಮಾದರಿಯಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಆಸ್ಪತ್ರೆ ಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಅವರು ಹೇಳಿದರು.
ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತ ನಾಡಿ, ಸರಕಾರದ ಭಾಗವಾಗಿರುವ ಸಚಿವ ಪ್ರಮೋದ್ ಮಧ್ವರಾಜ್ ಈ ವಿಚಾರ ತಿಳಿಯದಂತೆ ನಾಟಕವಾಡುತ್ತಿದ್ದಾರೆ. ಚುನಾವಣೆಗೆ ಮೊದಲು 500 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಅಭಿವೃದ್ಧಿ ಪಡಿಸುವುದಾಗಿ ಹೇಳಿದ ಶಾಸಕರು, ಈಗ ಅದನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆಂದು ದೂರಿದರು.
ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ ಮುಂದೆ ಈ ಆಸ್ಪತ್ರೆ ಯನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದ್ದಾರೆ. ವೈದ್ಯಕೀಯ ಶಿಕ್ಷಣ ಪಡೆಯುವ ವಿದೇಶಿ ವಿದ್ಯಾರ್ಥಿಗಳು ಇಲ್ಲಿ ನಮ್ಮ ರೋಗಿಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಅವರು ಆರೋಪಿಸಿದರು. ಬಳಿಕ ಈ ಕುರಿತ ಮನವಿಯನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಸಲ್ಲಿಸಲಾಯಿತು.
ಧರಣಿಯಲ್ಲಿ ಸಿಪಿಐ ಉಡುಪಿ ತಾಲೂಕು ಕಾರ್ಯ ದರ್ಶಿ ಕೆ.ವಿ.ಭಟ್, ದ.ಕ. ಮತ್ತು ಉಡುಪಿ ಜಿಲ್ಲಾ ಸಹಾಯಕ ಕಾರ್ಯ ದರ್ಶಿ ಬಿ.ಶೇಖರ್, ಜಿಲ್ಲಾ ಸಹಾಯಕ ಕಾರ್ಯದರ್ಶಿ ವಿ.ಸೀತಾರಾಂ ಬೇರಿಂಜ, ಮುಖಂಡರಾದ ಶಶಿಕಲಾ ಗಿರೀಶ್, ಸಂಜೀವ ಶೇರಿಗಾರ್, ರಾಮ ಮೂಲ್ಯ, ಶಾಂತ ನಾಯಕ್, ಎಂ.ಕರುಣಾಕರ್, ಸುರೇಶ್ ಕುಮಾರ್ ಉಪಸ್ಥಿತರಿದ್ದರು.







