ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಕ್‌ಗೆ ತಿರುಗೇಟು ನೀಡಿದ ಸುಶ್ಮಾ
ಪಾಕನ್ನು ನಾಗರಿಕ ದೇಶಗಳ ಸಾಲಿನಿಂದ ಹೊರಗಿಡಲು ಸುಶ್ಮಾ ಕರೆ

ನ್ಯೂಯಾರ್ಕ್, ಸೆ. 26: ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರ ವಿಷಯದಲ್ಲಿ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ಗೆ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಸೋಮವಾರ ತಕ್ಕ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನವನ್ನು ದೂರವಿಡಬೇಕು ಎಂಬುದಾಗಿ ಜಾಗತಿಕ ಸಮುದಾಯಕ್ಕೆ ಕರೆ ನೀಡಿದ ಸುಶ್ಮಾ ಸ್ವರಾಜ್, ‘‘ಭಯೋತ್ಪಾದನೆಯನ್ನು ಪೋಷಿಸಿ, ಮಾರಾಟ ಮತ್ತು ರಫ್ತು ಮಾಡುವ ದೇಶಗಳಿಗೆ ನಾಗರಿಕ ದೇಶಗಳ ಸಾಲಿನಲ್ಲಿ ಜಾಗವಿರಬಾರದು’’ ಎಂದು ಹೇಳಿದರು.
‘‘ನಮ್ಮ ನಡುವೆ ಈಗಲೂ ಭಯೋತ್ಪಾದನೆಯ ಭಾಷೆಯಲ್ಲಿ ಮಾತನಾಡುವ ದೇಶಗಳಿವೆ. ಈ ದೇಶಗಳು ಭಯೋತ್ಪಾದನೆಯನ್ನು ಪೋಷಿಸುತ್ತವೆ, ಮಾರಾಟ ಮಾಡುತ್ತವೆ ಹಾಗೂ ರಫ್ತು ಮಾಡುತ್ತವೆ. ಭಯೋತ್ಪಾದಕರಿಗೆ ಆಶ್ರಯ ನೀಡುವುದು ಅವುಗಳ ಜಾಯಮಾನವಾಗಿದೆ. ನಾವು ಈ ದೇಶಗಳನ್ನು ಗುರುತಿಸಿ, ಅವುಗಳ ಕೃತ್ಯಗಳಿಗೆ ಅವುಗಳನ್ನು ಜವಾಬ್ದಾರವಾಗಿಸಬೇಕು’’ ಎಂದು ತನ್ನ 20 ನಿಮಿಷಗಳ ಭಾಷಣದಲ್ಲಿ ಸುಶ್ಮಾ ಹೇಳಿದರು.
‘‘ಈ ದೇಶಗಳಲ್ಲಿ ವಿಶ್ವಸಂಸ್ಥೆಯಿಂದ ಘೋಷಣೆಗೊಳಗಾದ ಭಯೋತ್ಪಾದಕರು ಮುಕ್ತವಾಗಿ ಓಡಾಡುತ್ತಾರೆ, ಮೆರವಣಿಗೆಗಳನ್ನು ಏರ್ಪಡಿಸುತ್ತಾರೆ ಹಾಗೂ ದ್ವೇಷ ಭಾಷಣದ ವಿಷ ಉಗುಳುತ್ತಾರೆ ಹಾಗೂ ಕಾನೂನಿನ ಸರ್ವ ರಕ್ಷಣೆಯೊಂದಿಗೆ ಅವರು ಹೀಗೆ ಮಾಡುತ್ತಾರೆ. ಇಂಥ ದೇಶಗಳು ತಾವು ಪೋಷಿಸುವ ಭಯೋತ್ಪಾದಕರಷ್ಟೇ ಪಾತಕಿಗಳಾಗಿರುತ್ತವೆ. ಇಂಥ ದೇಶಗಳಿಗೆ ನಾಗರಿಕ ದೇಶಗಳ ಸಾಲಿನಲ್ಲಿ ಜಾಗವಿರಬಾರದು’’ ಎಂದರು.
‘‘26/11 ಮತ್ತು ಉರಿ ದಾಳಿಗಳ ಏರ್ಪಾಡು ಮಾಡಿದ ಭಯೋತ್ಪಾದಕ ವ್ಯವಸ್ಥೆಯೇ ಜಗತ್ತಿನಾದ್ಯಂತ ನಡೆದಿರುವ ಅಸಂಖ್ಯಾತ ಭಯೋತ್ಪಾದಕ ದಾಳಿಗಳ ಹಿಂದೆಯೂ ಇದೆ’’ ಎಂದರು.
ಕಾಶ್ಮೀರದಲ್ಲಿ ಭಾರತ ಮಾನವಹಕ್ಕುಗಳ ಉಲ್ಲಂಘನೆ ನಡೆಸುತ್ತಿದೆ ಎಂಬ ನವಾಝ್ ಶರೀಫ್‌ರ ಆರೋಪಗಳಿಗೆ ತಿರುಗೇಟು ನೀಡಿದ ವಿದೇಶ ಸಚಿವೆ, ‘‘ಇತರರು ಮಾನವಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸುವವರು ಒಂದು ಕ್ಷಣ ಆತ್ಮಶೋಧನೆ ಮಾಡಿಕೊಂಡು, ಬಲೂಚಿಸ್ತಾನ ಸೇರಿದಂತೆ ತಮ್ಮದೇ ದೇಶದಲ್ಲಿ ತಾವು ಯಾವ ರೀತಿಯಲ್ಲಿ ಮಾನವಹಕ್ಕುಗಳನ್ನು ಉಲ್ಲಂಘಿಸುತ್ತಿದ್ದೇವೆ ಎಂಬುದನ್ನು ನೋಡುವುದು ಒಳಿತು’’ ಎಂದರು.





