'ಸ್ಪೋಟಕ' ಸ್ಥಿತಿಯಲ್ಲಿ ಸ್ಯಾಮ್ ಸಂಗ್ !
# ಅಲ್ಲಲ್ಲಿ ಪಟಾಕಿಯಂತೆ ಸಿಡಿಯುತ್ತಿವೆ ಮೊಬೈಲ್ ಗಳು

# ನೋಟ್ 7 ಬಳಿಕ ಇದೀಗ ಇನ್ನೊಂದು ದುಬಾರಿ ಫೋನ್ ಸರದಿ
ಹೊಸದಿಲ್ಲಿ, ಸೆ. 26 : ವಿಶ್ವದ ವಿವಿಧೆಡೆ ತನ್ನ ಹೊಸ ನೋಟ್ ೭ ಸ್ಮಾರ್ಟ್ ಫೋನ್ ಸ್ಪೋಟದ ಸುದ್ದಿಯಿಂದ ಈಗಾಗಲೇ ಚಿಂತಿತವಾಗಿರುವ ಸ್ಯಾಮ್ ಸಂಗ್ ಪಾಲಿನ ಕಂಟಕ ಹೆಚ್ಚುವ ಲಕ್ಷಣಗಳು ಕಾಣುತ್ತಿವೆ. ಫಿಲಿಪೀನ್ಸ್ ನ ಮನಿಲಾದ ಮಹಿಳೆಯೊಬ್ಬರು ತನ್ನ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 7 ಮೊಬೈಲ್ ಸ್ಪೋಟಿಸಿದೆ ಎಂದು ಈಗ ದೂರಿದ್ದಾರೆ. ಆಕೆಯ ಪ್ರಕಾರ ಆಕೆ ಸಲೂನ್ ನಲ್ಲಿರುವಾಗ ಆಕೆಯ ಮಗಳು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 7 ಗೋಲ್ಡ್ ಮೊಬೈಲ್ ನಲ್ಲಿ ಆಡುತ್ತಿದ್ದಳು. ಇದ್ದಕ್ಕಿದ್ದಂತೆ ಮೊಬೈಲ್ ನಿಂದ ಹೊಗೆ ಬರಲಾರಂಭಿಸಿತು. ಆಕೆ ತಕ್ಷಣ ಫೋನನ್ನು ನೀರಿಗೆ ಹಾಕಿ ಬಳಿಕ ಅದನ್ನು ಟವೆಲ್ ಒಂದರಿಂದ ಸುತ್ತಿ ನೆಲಕ್ಕೆ ಹಾಕಿ ಕಾಲಿನಿಂದ ತುಳಿದು ಹೆಚ್ಚಿನ ಅಪಾಯ ತಪ್ಪಿಸಿದ್ದಾಳೆ.
ಸ್ಯಾಮ್ ಸಂಗ್ ಆಕೆಗೆ ಹೊಸ ಫೋನ್ ನೀಡಲು ಮುಂದೆ ಬಂದರೂ ಆಕೆ ಅದನ್ನು ತಿರಸ್ಕರಿಸಿದ್ದರಿಂದ ಕೂಡಲೇ ಆಕೆಗೆ ಹಣ ವಾಪಸ್ ಮಾಡಿ ಪ್ರಕರಣದ ಕುರಿತು ತನಿಖೆ ನಡೆಸುವುದಾಗಿ ಕಂಪೆನಿ ಹೇಳಿದೆ.
ವಿಶ್ವದ ವಿವಿಧೆಡೆ ತನ್ನ ಹೊಸ ನೋಟ್ 7 ಸ್ಮಾರ್ಟ್ ಫೋನ್ ಸ್ಫೋಟ ಪ್ರಕರಣ ಬೆಳಕಿಗೆ ಬಂದಿರುವುದು ಸ್ಯಾಮ್ ಸಂಗ್ ಪಾಲಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಹಲವು ವಿಮಾನ ಯಾನ ಸಂಸ್ಥೆಗಳು ತಮ್ಮ ವಿಮಾನದಲ್ಲಿ ಸ್ಯಾಮ್ ಸಂಗ್ ಮೊಬೈಲನ್ನು ನಿಷೇಧಿಸಿವೆ. ಇದರಿಂದ ಕೊನೆಗೆ ಆ ಹೊಸ ಫೋನನ್ನೇ ಮಾರುಕಟ್ಟೆಯಿಂದ ಹಿಂದೆಗೆದುಕೊಳ್ಳಲು ಕಂಪೆನಿ ಮುಂದಾಗಿದೆ.
ಇತ್ತೀಚಿಗೆ ಚೆನ್ನೈ ಯಿಂದ ಹೊರಟ ವಿಮಾನವೊಂದರಲ್ಲಿ ಸ್ಯಾಮ್ ಸಂಗ್ ನೋಟ್ 2 ಮೊಬೈಲ್ ಸ್ಫೋಟಿಸುವ ಮೂಲಕ ಸುದ್ದಿಯಾಗಿತ್ತು.
ನೋಟ್ 7 ಮೊಬೈಲ್ ಐಫೋನ್ 7 ಮೊಬೈಲ್ ಗೆ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ನೀಡುವ ಗುರಿಇಟ್ಟು ಬಂದಿತ್ತು. ಆದರೆ ಈಗ ಅದೇ ಸ್ಯಾಮ್ ಸಂಗ್ ನ ಅಸ್ಥಿತ್ವಕ್ಕೇ ಮಾರಕವಾಗುವ ಸ್ಥಿತಿ ನಿರ್ಮಾಣ ಮಾಡಿದೆ.







