ಮಕ್ಕಳ ಬಗ್ಗೆ ಎಚ್ಚರ ವಹಿಸಿ: ಸುಕುಮಾರ್
ಗದ್ದೆಹಳ್ಳದ ಬಾಲಕರ ವಿದ್ಯಾರ್ಥಿ ನಿಲಯದ ಪೋಷಕರ ಸಭೆ

ಸುಂಟಿಕೊಪ್ಪ, ಸೆ.26: ವಿದ್ಯಾರ್ಥಿ ನಿಲಯಗಳಿಗೆ ಪೋಷಕರು ಮಕ್ಕಳನ್ನು ಸೇರಿಸಿದ ನಂತರ ತಮ್ಮ ಕೆಲಸ ಮುಗಿಯಿತು ಎಂದು ಭಾವಿಸಿ, ಮಕ್ಕಳ ಯೋಗಕ್ಷೇಮ ವಿಚಾರಿಸುವುದಕ್ಕೆ ಪೋಷಕರು ಬರುತ್ತಿಲ್ಲ ಎಂದು ಗ್ರಾಪಂ ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಸಮೀಪದ ಗದ್ದೆಹಳ್ಳದ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ರವಿವಾರ ಆಯೋಜಿಸಿದ್ದ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು.
ಸರಕಾರವು ವಿದ್ಯಾರ್ಥಿ ನಿಲಯಗಳಿಗೆ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಅವೆಲ್ಲವೂ ಮಕ್ಕಳಿಗೆ ಸಮರ್ಪಕವಾಗಿ ದೊರಕುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಬೇಕಾದರೆ ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ, ಪೋಷಕರು ಮಕ್ಕಳ ಬಗ್ಗೆ ಆಗಿಂದಾಗ್ಗೆ ಎಚ್ಚರ ವಹಿಸಬೇಕು ಎಂದರು.
ತಾಪಂ ಸದಸ್ಯೆ ವಿಮಲಾವತಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮದಿಂದ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮುಂದುವರಿಯಲು ಸಾಧ್ಯ ಎಂದರು.
ಗ್ರಾಪಂ ಸದಸ್ಯೆ ಗಿರಿಜಾ ಉದಯಕುಮಾರ್ ಮಾತನಾಡಿ, ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಜೊತೆಯಲ್ಲಿ ಕ್ರೀಡೆಗೂ ಪ್ರೋತ್ಸಾಹ ನೀಡಬೇಕು. ಹಿರಿಯರು, ಕಿರಿಯರು ಎನ್ನುವ ಭೇದಭಾವವಿಲ್ಲದೇ ಒಗ್ಗಟ್ಟಿನಿಂದ ಸಹೋದರರಂತೆ ಇರಬೇಕು ಮತ್ತು ನಿಲಯದ ಎಲ್ಲ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಶಿಕ್ಷಕಿ ನಯನಾ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಸ್ವಾಮಿ ಮತ್ತಿತರರಿದ್ದರು.







