ಮೋದಿ ವಿದೇಶದಲ್ಲಿ ಖಾಯಂ ಆಗಿ ನೆಲೆಸುವುದು ಸೂಕ್ತ: ಶಾಸಕ ಕಿಮ್ಮನೆ ರತ್ನಾಕರ
ಬ್ಲಾಕ್ ಕಾಂಗ್ರೆಸ್ ಶೃಂಗೇರಿ-ಹರಿಹರಪುರ ಪಾದಯಾತ್ರೆಗೆ ಚಾಲನೆ
ಶೃಂಗೇರಿ, ಸೆ.26: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಗೂ ಮುನ್ನ ಎರಡು ತಿಂಗಳು ದೇಶದಾದ್ಯಂತ ನೂರಾರು ಸಭೆ ನಡೆಸಿ, ತಮ್ಮ ಮಾತಿನ ಮೋಡಿಯಲ್ಲಿ ಜನರಿಗೆ ಸುಳ್ಳು ಹೇಳುವ ಮೂಲಕ ದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣರಾದರು ಎಂದು ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ ಹೇಳಿದರು.
ಸೋಮವಾರ ಕೇಂದ್ರ ಸರಕಾರದ ಜನ ವಿರೋಧಿ ಹಾಗೂ ರೈತ ವಿರೋಧಿ ನೀತಿಯನ್ನು ಖಂಡಿಸಿ, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಶೃಂಗೇರಿ-ಹರಿಹರಪುರ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಆದರೆ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳು ಸುಳ್ಳು ಎಂಬುದು ಈಗ ಜನ ಸಾಮಾನ್ಯರಿಗೆ ಅದರಲ್ಲೂ ರೈತರಿಗೆ ಹೆಚ್ಚು ಮನವರಿಕೆಯಾಗಿದೆ. ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ತಲಾ ಹದಿನೈದು ಲಕ್ಷ ರೂ. ನೀಡುವುದಾಗಿ ಹೇಳಿದ್ದ ಅವರು, ತೀರ್ಥಹಳ್ಳಿ ತಾಲೂಕಿಗೆ ಕಳುಹಿಸಿದ್ದಾರೆ. ನೀವು ಏಕೆ ಇನ್ನೂ ಪಡೆದಿಲ್ಲ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ದೇಶದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಸಂಘ ಪರಿವಾರದಿಂದ ನಿರಂತರ ಕಿರುಕುಳ ನಡೆದಿದೆ. ಮನ್ ಕಿ ಬಾತ್ ನಲ್ಲಿ ಶೌಚಾಲಯ, ಸ್ವಚ್ಛತೆ ಬಗ್ಗೆ ಮಾತನಾಡುವ ಪ್ರಧಾನಿ ಮಹಾದಾಯಿ, ಹಾಗೂ ಕಾವೇರಿ ವಿವಾದದ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಪಾದಯಾತ್ರೆಗೆ ಶಾಸಕ ಕಿಮ್ಮನೆ ರತ್ನಾಕರ ಚಾಲನೆ ನೀಡಿದರು.
ಪಾದಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯಕುಮಾರ್, ಪಕ್ಷದ ಮುಖಂಡರಾದ ಟಿ.ಡಿ.ರಾಜೇಗೌಡ, ಗಾಯತ್ರಿ ಶಾಂತೇಗೌಡ, ಮತ್ತಿತರರು ಪಾಲ್ಗೊಂಡಿದ್ದರು.
n
ಮೋದಿ ವಿದೇಶದಲ್ಲಿ ಖಾಯಂ ಆಗಿ ನೆಲೆಸುವುದು ಸೂಕ್ತ. ವಿದೇಶ ಪ್ರವಾಸದಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ. ಬಿಜೆಪಿ ಸರಕಾರ ಬಂದ ನಂತರ ಗೋಮಾಂಸ ಮಾರಾಟದ ರಪ್ತು ಹೆಚ್ಚಾಗಿದೆ. ಇದು ಬಿಜೆಪಿ ಗೋಮಾತೆ ಹೆಸರಿನಲ್ಲಿ ನಡೆಸುತ್ತಿರುವ ಸುಳ್ಳು ಗೋ ಪ್ರೇಮವಾಗಿದೆ. ಬಿಜೆಪಿಯ ಉಪ ಸಂಘಟನೆಗಳು ಹತ್ತಾರು ಇದ್ದು, ಸಮಾಜದ ಅಹಿತಕರ ಘಟನೆಗಳನ್ನು ಆ ಸಂಘಟನೆಗಳ ಮೂಲಕ ಆಡಿಸುತ್ತಿದೆ. ಘಟನೆ ನಂತರ ಪಕ್ಷಕ್ಕೂ ಸಂಘಟನೆಗೂ ಸಂಬಂಧವಿಲ್ಲ ಎಂದು ಬಿಜೆಪಿ ನುಣುಚಿಕೊಳ್ಳುತ್ತಿದೆ. ಕಿಮ್ಮನೆ ರತ್ನಾಕರ ತೀರ್ಥಹಳ್ಳಿ ಶಾಸಕ







