ತಹಶೀಲ್ದಾರ್ ನೇತೃತ್ವದಲ್ಲಿ ಒತ್ತುವರಿ ಜಾಗ ತೆರವು
ಒತ್ತುವರಿದಾರರ ವಿರುದ್ಧ ಕ್ರಮ
.jpg)
ಸಾಗರ, ಸೆ.26: ತಾಲೂಕಿನ ಆವಿನಹಳ್ಳಿ ಸರ್ವೇ ನಂ. 92ರಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿದ್ದ ಸರಕಾರಿ ಜಾಗವನ್ನು ತಹಶೀಲ್ದಾರರ ನೇತೃತ್ವದಲ್ಲಿ ಸೋಮವಾರ ಕಂದಾಯ ಇಲಾಖೆ ಹಾಗೂ ಪೊಲೀಸ್‌ಸಿಬ್ಬಂದಿ ತೆರವುಗೊಳಿಸಿದರು. ಆವಿನಹಳ್ಳಿ ಸರ್ವೇ ನಂ. 92ರಲ್ಲಿನ ಸುಮಾರು 40 ಎಕರೆ ಸರಕಾರಿ ಜಮೀನನ್ನು ಕೆಲವರು ಒತ್ತುವರಿ ಮಾಡಿ, ಅಗಳು ತೋಡಿ, ಕಲ್ಲು ಬೇಲಿ ಹಾಕಿದ್ದಾರೆ ಎಂದು ಸೆ. 23ರಂದು ಸಾಗರಕ್ಕೆ ಲೋಕಾಯುಕ್ತರು ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳೀಯರು ದೂರು ನೀಡಿದ್ದರು. ಲೋಕಾಯುಕ್ತರು ಸೆ. 28ರೊಳಗೆ ಒತ್ತುವರಿ ತೆರವುಗೊಳಿಸಿ, ವರದಿ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಕಾರ್ಯಾಚರಣೆ ನಡೆಸಿದ ತಹಶೀಲ್ದಾರ್ ನೇತೃತ್ವದ ತಂಡ ಜೆಸಿಬಿ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು. ಸರ್ವೇ ನಂ. 92ರಲ್ಲಿ 94ಸಿ. ಅಡಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದವರನ್ನು ಹೊರತುಪಡಿಸಿ, ಹೊಸದಾಗಿ ಒತ್ತುವರಿ ಮಾಡಿದ್ದನ್ನು ಈ ಸಂದರ್ಭದಲ್ಲಿ ತೆರವುಗೊಳಿಸಲಾಯಿತು. ಸರಕಾರಿ ಜಮೀನು ಸಂರಕ್ಷಣೆ:
ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್, ಜಮೀನು ಒತ್ತುವರಿ ಬಗ್ಗೆ ಸಾರ್ವಜನಿಕರು ಹಿಂದಿನಿಂದಲೂ ದೂರು ಸಲ್ಲಿಸುತ್ತಾ ಬಂದಿದ್ದರು. ನಾವು ಒತ್ತುವರಿದಾರರಿಗೆ ನೋಟಿಸ್ ಜಾರಿಗೊಳಿಸಿದ್ದೇವೆ. ಲೋಕಾಯುಕ್ತ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಭಾಗದಲ್ಲಿ ಕೆಲವರು 25 ರಿಂದ 50 ಎಕರೆವರೆಗೆ ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆೆ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರು ತಕ್ಷಣ ಸರಕಾರಿ ಜಮೀನು ಖಾಲಿ ಮಾಡಬೇಕು. ಇಲ್ಲವಾದಲ್ಲಿ ಅಂಥವರ ಮೇಲೆ 192 ಎ ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಿಂದೆ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಬಗರ್‌ಹುಕುಂ, 94ಸಿ ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದವರನ್ನು ಹೊರತುಪಡಿಸಿ, ಹೊಸ ಒತ್ತುವರಿದಾರರ ವಿರುದ್ಧ್ದ ಕಂದಾಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಸರಕಾರಿ ಜಮೀನನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಪ್ರಕಾರ ಒತ್ತುವರಿದಾರರ ವಿರುದ್ಧ ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಉಪ ತಹಶೀಲ್ದಾರ್ ರೇಣುಕಪ್ಪ, ರಾಜಸ್ವ ನಿರೀಕ್ಷಕ ವಿಜಯಕುಮಾರ್ ಹಾಗೂ ಗ್ರಾಮ ಪಂಚಾಯತ್, ರಕ್ಷಣಾ ಸಿಬ್ಬಂದಿ ಉಪಸ್ಥಿತರಿದ್ದರು.







