ಕೆ.ಜೆ.ಜಾರ್ಜ್‌ಗೆ ಸಚಿವ ಸ್ಥಾನ: ಜೆಡಿಎಸ್‌ನಿಂದ ಪ್ರತಿಭಟನೆ

ಮಡಿಕೇರಿ ಸೆ.26: ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಜಾತ್ಯಾತೀತ ಜನತಾದಳದ ಜಿಲ್ಲಾ ಘಟಕ ನಗರದ ಗಾಂಧಿ ಮಂಟಪದ ಎದುರು ಪ್ರತಿಭಟನೆ ನಡೆಸಿತು.
ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಸಚಿವರಾಗಿ ಕೆ.ಜೆ.ಜಾರ್ಜ್ ಅವರು ಮತ್ತೆ ಪ್ರಮಾಣ ವಚನ ಸ್ವೀಕರಿಸಿರುವುದು ಅತ್ಯಂತ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜೆಡಿಎಸ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಮುಖ್ಯಮಂತ್ರಿಗಳ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು. ಸಿಐಡಿ ತನಿಖೆಯ ಬಿ ರಿಪೋರ್ಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಸೆ.29 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆದರೆ, ಪ್ರಕರಣ ನ್ಯಾಯಾಲಯದಲ್ಲಿರುವ ಹಂತದಲ್ಲೇ ಆತುರದಿಂದ ಕೆ.ಜೆ.ಜಾರ್ಜ್ ಅವರು ಮಂತ್ರಿ ಪದವಿ ಸ್ವೀಕರಿಸಿದ್ದು, ಇದು ರಾಜ್ಯದ ಜನತೆಗೆ ಮಾಡಿದ ಅಪಮಾನವಾಗಿದೆ ಎಂದು ಅವರು ಟೀಕಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಶ್ವ, ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎಚ್.ಎನ್.ಯೋಗೇಶ್ ಕುಮಾರ್, ಉಪಾಧ್ಯಕ್ಷ ಎಚ್.ಜಿ.ಗೋಪಾಲ, ಮಹಿಳಾ ಘಟಕದ ಪ್ರಮುಖರಾದ ಸುವರ್ಣ, ಶಶಿ, ಆಲೂರು ಸಿದ್ದಾಪುರ ಗ್ರಾಪಂ ಮಾಜಿ ಅಧ್ಯಕ್ಷೆ ಲತಾ, ದುಂಡಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಬೋಜಪ್ಪ, ಕುಟ್ಟ ಘಟಕದ ಅಧ್ಯಕ್ಷ ಪಿ.ವಿ.ರನ್ನಿ ಮತ್ತಿತರರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಪತ್ರವನ್ನು ನೀಡಿದರು.





