ಸಾಹಿತ್ಯ ಸಮ್ಮೇಳನ ಹಬ್ಬದ ರೀತಿಯಲ್ಲಿ ಆಚರಣೆಯಾಗಲಿ: ಸಾಹಿತಿ ಡಾ.ನಾ.ಡಿಸೋಜ
.jpg)
ಸಾಗರ, ಸೆ.26: ಕನ್ನಡ ಸಾಹಿತ್ಯ ಜನರಿಂದ ದೂರವಾಗುತ್ತಿರುವ ಹೊತ್ತಿನಲ್ಲಿ ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡ ನಾಡುನುಡಿಯ ವೈಶಿಷ್ಟ್ಯತೆಯನ್ನು ಮನೆಮನೆಗೆ ತಲುಪಿಸುವ ಕೆಲಸವಾಗಬೇಕು ಎಂದು ಸಾಹಿತಿ ಡಾ.ನಾ.ಡಿಸೋಜ ಹೇಳಿದರು.
ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನ ಊರಿನ ಹಬ್ಬದ ರೀತಿಯಲ್ಲಿ ಆಚರಣೆಯಾಗಬೇಕು. ಸಾಹಿತ್ಯ ಸಮ್ಮೇಳನ ನಡೆಯುವ ಮೂರು ದಿನಗಳೂ ಮನೆಗಳು, ಕಚೇರಿ, ಸಂಘಸಂಸ್ಥೆಗಳ ಮೇಲೆ ಕನ್ನಡ ಧ್ವಜ ಹಾರುವಂತಾಗಬೇಕು ಎಂದು ಅವರು ಅಭಿಪ್ರಾಯಿಸಿದರು. ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಹಿತಕರ ಜೈನ್ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನ ಯಶಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ತಾಲೂಕಿನ 150ಕ್ಕೂ ಹೆಚ್ಚು ಸಂಘ ಸಂಸ್ಥೆಗಳನ್ನು ಸಮಿತಿಗಳಲ್ಲಿ ಸೇರಿಸಿಕೊಳ್ಳಲಾಗಿದೆ. ತಾಲೂಕಿನ 35 ಗ್ರಾಪಂಗೂ ಆಹ್ವಾನಪತ್ರಿಕೆ ತಲುಪಿಸಿ, ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ಪ್ರತಿದಿನ 5ಸಾವಿರ ಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವ ನಿರೀಕ್ಷೆ ಹೊಂದಲಾಗಿದೆ ಎಂದರು. ಗಾಂಧಿಮೈದಾನದಲ್ಲಿ ಸಮ್ಮೇಳನ ನಡೆಯಲಿದ್ದು, ಸೆ. 30 ರಂದು ಬೆಳಗ್ಗೆ 8ಕ್ಕೆ ಉಪವಿಭಾಗಾಧಿಕಾರಿ ಡಿ.ಎಂ.ಸತೀಶಕುಮಾರ್ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ವಿ.ಗಣೇಶ್ ವಹಿಸಲಿದ್ದು, ರವೀಂದ್ರ ಭಟ್ ಕುಳಿಬೀಡು, ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್, ಲೇಖಕ ವಿಲಿಯಂ ಉಪಸ್ಥಿತರಿರುವರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಮ್ಮೇಳನಕ್ಕೆ ಸರ್ವರೂ ಆಗಮಿಸಿ, ಯಶಸ್ವಿಗೊಳಿಸಿಕೊಡಬೇಕು ಎಂದು ಅಧ್ಯಕ್ಷ ಹಿತಕರ ಜೈನ್ ತಿಳಿಸಿದರು. ಗೋಷ್ಠಿಯಲ್ಲಿ ನಾರಾಯಣಮೂರ್ತಿ, ವೆಂಕಟೇಶ್, ರಾಜೇಂದ್ರ ಪೈ, ಕ್ಯಾಪ್ಟನ್ ನಾಗರಾಜ್, ಸುರೇಶ್ ಬಸ್ರೂರು, ಸತ್ಯನಾರಾಯಣ ಉಪಸ್ಥಿತರಿದ್ದರು.





