ಕೋಶ ಓದುವ ಬದಲು ದೇಶ ಸುತ್ತಿ ನೋಡಿ…!
ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ

ಪ್ರವಾಸ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಹಿರಿಯರು ಹೇಳಿರುವ ಹಾಗೇ “ದೇಶ ಸುತ್ತು ಕೋಶ ಓದು” ಎನ್ನುವ ನಾಣ್ನುಡಿಯ ಹಾಗೇ ಪ್ರತಿಯೊಬ್ಬರಿಗೂ ಹೊಸ ಪ್ರದೇಶವನ್ನು ನೋಡಬೇಕು ಎನ್ನುವ ಆಸೆಯಿರುತ್ತದೆ.
ಹೊಸ ಜಾಗಕ್ಕೆ ಕಾಲಿಟ್ಟೊಡನೆ ಹಲವು ವಿಸ್ಮಯಗಳು ನಮ್ಮ ಅರಿವಿಗೆ ಬರುತ್ತವೆ. ಅಲ್ಲಿನ ಆಚಾರ-ವಿಚಾರ, ಸಂಸ್ಕೃತಿ, ಜನಾಂಗೀಯ ಭಿನ್ನತೆ, ಭಾಷೆ, ಭೂಮಿಯ ರಚನೆ ಹೀಗೆ ಹಲವಾರು ಅದ್ಭುತಗಳನ್ನು ನಾವು ಕಾಣುತ್ತೇವೆ. ಹಾಗಾಗಿ ಪ್ರವಾಸ ಮಾಡುವುದನ್ನು ಹವ್ಯಾಸವಾಗಿ ನಾವು ರೂಪಿಸಿಕೊಂಡಿದ್ದೇವೆ. ಈ ಹವ್ಯಾಸವೇ ಇಂದು ದೊಡ್ಡ ಉದ್ಯಮದ ಸ್ವರೂಪ ಪಡೆದುಕೊಂಡಿದ್ದು, ವಿಶ್ವದ ಎಲ್ಲ ರಾಷ್ಟ್ರಗಳ ಪಾಲಿಗೂ ಪ್ರವಾಸೋದ್ಯಮ ಪ್ರಮುಖ ಆದಾಯದ ಮೂಲವಾಗಿ ಬದಲಾಗಿದೆ.
ಸೆ.27 ವಿಶ್ವ ಪ್ರವಾಸೋದ್ಯಮ ದಿನಾಚರಣೆ. 1970ರ ಸೆ.27ರಂದು ವಿಶ್ವಸಂಸ್ಥೆ ಈ ದಿನವನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸಲು ಕಾನೂನುಬದ್ಧ ಮಾನ್ಯತೆ ನೀಡಿದೆ. ಇದು ಪ್ರವಾಸೋದ್ಯಮಕ್ಕೆ ದೊಡ್ಡ ಮೈಲುಗಲ್ಲಾಗಿದೆ.
ಈ ಆಚರಣೆಯ ಮುಖ್ಯ ಉದ್ದೇಶ ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕತೆಗಳ ಬಗ್ಗೆ ಅಂತಾರಾಷ್ಟ್ರಿಯ ವೇದಿಕೆಯಲ್ಲಿ ಜಾಗೃತಿ ಮೂಡಿಸುವುದಾಗಿದೆ. 1997ರಲ್ಲಿ ಟರ್ಕಿಯ ಇಸ್ತಾನ್ ಬುಲ್ ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಪ್ರತಿವರ್ಷ ಸೆ.27ರಂದು ಒಂದು ದೇಶವನ್ನು ಅತಿಥಿ ದೇಶವನ್ನಾಗಿ ಆಯ್ಕೆಮಾಡಿ, ಆ ದೇಶದಲ್ಲಿ ಮುಖ್ಯ ವೇದಿಕೆಯನ್ನಾಗಿ ಸಭೆ ನಡೆಸಲು ತಿಮಾರ್ನ ತೆಗೆದುಕೊಂಡಿತು.
2003ರಲ್ಲಿ ಚೀನಾ, 2006ರಲ್ಲಿ ಯುರೋಪ್, 2008ರಲ್ಲಿ ಅಮೆರಿಕ ಹೀಗೆ ಸೆ.27ರಂದು ಆಚರಣೆ ಮಾಡಲಾಯಿತು.
ಈ ವರ್ಷ ಥೈಲಾಂಡ್ ನ ಬ್ಯಾಂಕಾಂಕ್ ನಲ್ಲಿ ಆಚರಣೆ ಮಾಡಲು ತೀರ್ಮಾನ ತೆಗೆದುಕೊಂಡಿದೆ. ಈ ವರ್ಷದ ಪ್ರವಾಸೋದ್ಯಮದ ಘೋಷಣೆ “ ಎಲ್ಲರಿಗಾಗಿ ಪ್ರವಾಸೋದ್ಯಮ” ಎಂಬುದಾಗಿದೆ. ಅಂದರೆ ಮಕ್ಕಳು, ಅಂಗವಿಕಲರು, ಮಹಿಳೆಯರು, ಹಿರಿಯರು ಎನ್ನುವ ಭೇದ ಭಾವವಿಲ್ಲದೆ ಸಾರ್ವತ್ರಿಕವಾ5್ಗಿ ಪ್ರವಾಸ ಕೈಗೊಳ್ಳುವುದು ಎಲ್ಲರಿಗೂ ಅನ್ವಯವಾಗಬೇಕೆಂಬುದು ವಿಶ್ವ ಪ್ರವಾಸೋದ್ಯಮ ಮಂಡಳಿಯ ಆಕಾಂಕ್ಷೆಯಾಗಿದೆ.
ವಿಶ್ವದ ನಾನಾ ಕಡೆ ಹಲವು ಪ್ರಕೃತಿ ನಿರ್ಮಿತ ವಿಸ್ಮಯ, ಮಾನವ ನಿರ್ಮಿತ ಅದ್ಭುತ ವಾಸ್ತು ಶಿಲ್ಪಗಳು, ಜಲಪಾತ, ನದಿ, ನಯನ ಮನೋಹರ ಸಮುದ್ರ ತೀರಗಳು ಹೀಗೆ ಸಾವಿರಾರು ಕೌತುಕದ ಸ್ಥಳಗಳಿಗೆ ಕುಟುಂಬ ಸದಸ್ಯರೊಂದಿಗೆ, ಸ್ನೇಹಿತರೊಂದಿಗೆ ಅಥವಾ ಏಕಾಂಗಿಯಾಗಿ ಭೇಟಿ ನೀಡಿ ಜೀವನದ ಅತ್ಯಮೂಲ್ಯ ವೇಳೆಯನ್ನು ಕಳೆಯಲು ಇಷ್ಟಪಡುತ್ತಾರೆ.
ಭಾರತದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಜಗತ್ತಿನ ಏಳು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದ ತಾಜ್ ಮಹಲ್ ಸೇರಿದಂತೆ, ವಿಶ್ವದಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ, ಅಜಂತಾ ಎಲ್ಲೋರದ ಗುಹಾಲಯಗಳು, ದೆಹಲಿಯ ಕೆಂಪುಕೋಟೆ, ಕುತುಬ್ ಮಿನಾರ ಕೇರಳದ ಸೊಬಗು, ಭೂ ಲೋಕದ ಸ್ವರ್ಗ ಎಂದು ಕರೆಯಿಸಿಕೊಳ್ಳುವ ಕಾಶ್ಮಿರದ ಹಿಮಚ್ಛಾದಿತ ಕಣಿವೆಗಳು, ಅಮೃತ್ ಸರ್ ನ ಸ್ವರ್ಣ ಮಂದಿರ, ಕೋಲ್ಕತಾದ ಮ್ಯೂಸಿಯಂ, ಪಶ್ಚಿಮ ಘಟ್ಟದ ಪ್ರಾಣಿ ಪಕ್ಷಿಗಳ ಜೀವ ಸಂಕುಲ ಹೀಗೆ ಇನ್ನು ಅನೇಕ ಸ್ಥಳಗಳಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.
ಒಟ್ಟಾರೆ ಭಾರತ ಪ್ರವಾಸೋದ್ಯಮದ ಸ್ಲೋಗನ್ “ಇನ್ ಕ್ರೆಡಿಬಲ್ ಇಂಡಿಯಾ!” ಎಂಬುದಾಗಿದೆ.
ಕರ್ನಾಟಕದಲ್ಲಿ ಮೈಸೂರು ಅರಮನೆ, ವಿಜಯಪುರದ ಗೋಳಗುಮ್ಮಟ, ಶಿವಮೊಗ್ಗದ ಜೋಗ ಜಲಪಾತ, ಬದಾಮಿಯ ಗುಹಾಲಯಗಳು, ಹಂಪಿಯ ಕಲ್ಲಿನ ರಥ, ಬೇಲೂರಿನ ವಾಸ್ತುಶಿಲ್ಪಗಳು ಕಲಬುರಗಿಯ ಬಂದೇನವಾಜ್ ದರ್ಗಾ ಕೂಡಾ ವಿಶ್ವದ ಪ್ರವಾಸಿಗರ ಕಣ್ಣು ಕುಕ್ಕುವ ಸ್ಥಳಗಳಾಗಿವೆ.
ಕರ್ನಾಟಕದ ಪ್ರವಾಸೋದ್ಯಮ ಇಲಾಖೆ “ಒಂದು ರಾಜ್ಯ ಹಲವು ಜಗತ್ತು” ಎಂಬ ಸ್ಲೋಗನ್ ಹೊಂದಿದೆ.







