ಮೊದಲ ಏಕದಿನ: ಅಫ್ಘಾನ್ ವಿರುದ್ಧ ಬಾಂಗ್ಲಾಕ್ಕೆ ರೋಚಕ ಗೆಲುವು

ಢಾಕಾ, ಸೆ.26: ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 7 ರನ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾದ ವೇಗದ ಬೌಲರ್ ಟಸ್ಕಿನ್ ಅಹ್ಮದ್(4-59) ನಾಲ್ಕು ವಿಕೆಟ್ ಪಡೆದು ಗಮನ ಸೆಳೆದರು.
ಗೆಲುವಿಗೆ 266 ರನ್ ಸವಾಲು ಪಡೆದ ಅಫ್ಘಾನಿಸ್ತಾನ ಒಂದು ಹಂತದಲ್ಲಿ ಗೆಲುವಿನ ಕನಸು ಕಾಣುತ್ತಿತ್ತು. ಶಾಹಿದಿ(72) ಹಾಗೂ ರಹ್ಮತ್ ಶಾ(71) 3ನೆ ವಿಕೆಟ್‌ಗೆ 144 ರನ್ ಜೊತೆಯಾಟ ನಡೆಸಿ ಅಫ್ಘಾನ್‌ಗೆ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಆದರೆ, ಶಾಕಿಬ್ ಅಲ್ ಹಸನ್(2-26) ಈ ಜೋಡಿಯನ್ನು ಬೇರ್ಪಡಿಸಿದರು.
ಉತ್ತಮ ಆರಂಭ ಪಡೆದಿದ್ಧ ಅಫ್ಘಾನ್ ತಂಡ 28 ರನ್‌ಗೆ ಕೊನೆಯ 6 ವಿಕೆಟ್ ಕಳೆದುಕೊಂಡು ಹಿನ್ನಡೆ ಕಂಡಿತು. ಅಂತಿಮ ಓವರ್‌ನಲ್ಲಿ 13 ರನ್ ಅಗತ್ಯವಿದ್ದಾಗ ದಾಳಿಗಿಳಿದ ಟಸ್ಕಿನ್ ಅಫ್ಘಾನ್‌ಗೆ ಗೆಲುವು ನಿರಾಕರಿಸಿದರು. ಅಫ್ಘಾನ್ 50 ಓವರ್‌ಗಳಲ್ಲಿ 258 ರನ್‌ಗೆ ಆಲೌಟಾಯಿತು.
ಇದಕ್ಕೂ ಮೊದಲು ತಮೀಮ್ ಇಕ್ಬಾಲ್(80) ಹಾಗೂ ಮಹ್ಮೂದುಲ್ಲಾ ರಿಯಾದ್(62) ಅರ್ಧಶತಕದ ಬೆಂಬಲದಿಂದ ಬಾಂಗ್ಲಾದೇಶ 265 ರನ್ ಗಳಿಸಿತು. ತಮೀಮ್ ಬಾಂಗ್ಲಾದ ಪರ 9,000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಅಫ್ಘಾನ್ ಪರ ದೌಲತ್ ಝದ್ರಾನ್(4-73) ಯಶಸ್ವಿ ಬೌಲರ್ ಎನಿಸಿಕೊಂಡರು.







