ನಕಲಿ ವೈದ್ಯರು ಬರೆ ಹಾಕಿದ್ದ ಇಬ್ಬರು ಬಾಲಕಿಯರು ಆಸ್ಪತ್ರೆಗೆ
ಜೈಪುರ, ಸೆ. 26: ಭಿಲ್ವಾರದಲ್ಲಿ ನಕಲಿ ವೈದ್ಯರಿಂದ ಕಾಯಿಸಿದ ಸರಳಿನ ಬರೆ ಹಾಕಿಸಿಕೊಂಡ ಇಬ್ಬರು ಬಾಲಕಿಯರು ಆಸ್ಪತ್ರೆ ಸೇರಿದ ಆಘಾತಕರ ಘಟನೆ ವರದಿಯಾಗಿದೆ.
ನ್ಯುಮೋನಿಯದಿಂದ ಬಳಲುತ್ತಿದ್ದ 9ರ ಹರೆಯದ ಬಾಲಕಿಯೊಬ್ಬಳನ್ನು ಶುಕ್ರವಾರ ಎಂ.ಜಿ. ಸರಕಾರಿ ಆಸ್ಪತ್ರೆಗೆ ತರಲಾಗಿತ್ತು. ಬಾಲಕಿಯ ಹೆತ್ತವರು ಮೊದಲು ಆಕೆಯನ್ನು ನಕಲಿ ವೈದ್ಯನೊಬ್ಬನ ಬಳಿಗೆ ಒಯ್ದಿದ್ದರು. ಆತ ಅವಳಿಗೆ ಕಾಯಿಸಿದ ಸರಳಿನಿಂದ ಬರೆ ಹಾಕಿದ್ದಾನೆ, ಆ ಗಾಯಗಳು ಬಾಲಕಿಯ ಶರೀರದ ಮೇಲೆ ಕಾಣಿಸುತ್ತವೆಂದು ಮಕ್ಕಳ ತಜ್ಞ ಡಾ. ಒ.ಪಿ. ಅಗಲ್ ತಿಳಿಸಿದ್ದಾರೆ. ತಾವು ಚಿಕಿತ್ಸೆ ಆರಂಭಿಸಿದೊಡನೆಯೇ ಹೆತ್ತವರು ಆಸ್ಪತ್ರೆಯ ಆಡಳಿತಕ್ಕೆ ತಿಳಿಸದೆಯೇ ಬಾಲಕಿಯನ್ನು ಕರೆದೊಯ್ದರೆಂದು ಅವರು ಹೇಳಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ರಕ್ತ ಹೀನತೆಯಿಂದ ಬಳಲುತ್ತಿದ್ದ 2ರ ಹರೆಯದ ಬಾಲಕಿಯೊಬ್ಬಳನ್ನು ನಿನ್ನೆ ಅಂತಹದೇ ಬರೆಗಳೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆಯ ಹೆತ್ತವರೂ ಅವಳನ್ನು ನಕಲಿ ವೈದ್ಯರ ಬಳಿ ಒಯ್ದಿದ್ದು, ಆತ ಕಬ್ಬಿಣ ಕಾಯಿಸಿ ಬರೆ ಹಾಕಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.ಎರಡೂ ಪ್ರಕರಣಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆಯೆಂದು ಅವರು ಹೇಳಿದ್ದಾರೆ.





