ವೇದಿಕೆಯಲ್ಲಿ ಜಗಳವಾಡಿದ ಕೇಂದ್ರ ಸಚಿವರು
ಹೊಸದಿಲ್ಲಿ, ಸೆ.26: ರಿಯೋ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾದವರು ಹಾಗೂ ಸ್ಪರ್ಧಾಳುಗಳಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭವೊಂದರಲ್ಲಿ ಕೇಂದ್ರದ ಇಬ್ಬರು ಸಚಿವರು ಪ್ರೇಕ್ಷಕರ ಸಮ್ಮುಖದಲ್ಲಿ ಜಗಳಕ್ಕಿಳಿದ ಘಟನೆ ನಡೆದಿದೆ. ಕೇಂದ್ರ ರೈಲ್ವೆ ಖಾತೆಯ ಸಹಾಯಕ ಸಚಿವ ವಿಜಯ್ ಗೋಯೆಲ್ ಹಾಗೂ ನಗರಾಭಿವೃದ್ಧಿ ಸಚಿವ ರಾವ್ ಇಂದ್ರಜಿತ್ ಸಿಂಹ್ ಅವರೇ ಈ ಇಬ್ಬರು ಸಚಿವರುಗಳು. ಇವರಿಬ್ಬರಲ್ಲಿ ಸಿಂಹ್ ಅವರು ಪ್ಯಾರಾ ಒಲಿಂಪಿಕ್ಸ್ ಕಮಿಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿರುವ ಹೊರತಾಗಿಯೂ ಅವರು ಪ್ಯಾರಾ ಒಲಿಂಪಿಕ್ಸ್ ವೀಕ್ಷಿಸಲು ರಿಯೋಗೆ ತೆರಳದಿದ್ದುದೇ ಈ ವಾಗ್ವಾದಕ್ಕೆ ಕಾರಣವಾಯಿತು.
ಈ ಕಾರ್ಯಕ್ರಮದಲ್ಲಿ ವೊದಲು ಭಾಷಣ ಮಾಡಿದ ಗೋಯಲ್ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾ, ಇಂದ್ರಜಿತ್ ಅವರ ರಿಯೋ ಪ್ರವಾಸ ಕುರಿತಾದ ಕಡತವನ್ನು ಕ್ಲಿಯರ್ ಮಾಡಲಾಗಿತ್ತೆಂದು ಹೇಳಿದರು. ಇವರ ನಂತರ ಭಾಷಣ ಮಾಡಿದ ಇಂದ್ರಜಿತ್, ಗೋಯಲ್ ತಮ್ಮ ಕಡತ ಕ್ಲಿಯರ್ ಮಾಡಿಲ್ಲವೆಂದು ತಮಗೆ ಗೊತ್ತಿತ್ತು ಎಂದರು.
ಗೋಯಲ್ ಅವರು ರಿಯೋ ಒಲಿಂಪಿಕ್ಸ್ ವೀಕ್ಷಿಸಲು ಹೋಗಿದ್ದ ಸಂದಭರ್ದಲ್ಲಿ ಸಾಕಷ್ಟು ವಿವಾದಕ್ಕೀಡಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಅವರ ನಡವಳಿಕೆ ಬಗ್ಗೆ ರಿಯೋ ಒಲಿಂಪಿಕ್ಸ್ ಇದರ ಮುಖ್ಯ ಮ್ಯಾನೇಜರ್ ಸಾರಾ ಪೀಟರ್ಸನ್ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ, ಗೋಯಲ್ ಅವರು ಸಂಬಂಧಿತ ಮಾನ್ಯತಾ ಕಾರ್ಡ್ ಹೊಂದಿರದೆ ಇದ್ದ ಹೊರತಾಗಿಯೂ ಈ ಕಾರ್ಡ್ ಹೊಂದಿರುವವರೊಡನೆ ಇತರರಿಗೆ ಪ್ರವೇಶವಿಲ್ಲದ ಸ್ಥಳಗಳಿಗೆ ಪ್ರವೇಶಿಸಲು ಯತ್ನಿಸಿದ್ದರೆಂದು ಆರೋಪಿಸಿದ್ದರು. ಗೋಯಲ್ ಅವರ ನಡವಳಿಕೆಯನ್ನು ವಿರೋಧಿಸಿದಾಗ ಆವರ ಜೊತೆಯಲ್ಲಿದ್ದವರು ಆಕ್ರಮಣಕಾರಿಯಾಗಿ ವರ್ತಿಸಿದ್ದರಲ್ಲದೆ ಒಲಿಂಪಿಕ್ಸ್ ಸಮಿತಿಯ ಸಿಬ್ಬಂದಿಗೆ ಹಲ್ಲೆ ನಡೆಸಲೂ ಯತ್ನಿಸಿದ್ದರು ಎಂದು ಸಾರಾ ಆರೋಪಿಸಿದ್ದರು.
ಅಲ್ಲದೆ, ಒಲಿಂಪಿಕ್ಸ್ ಸಂದರ್ಭ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರ ಹೆಸರನ್ನು ದೀಪಾ ಕರ್ಮಾನ್‌ಕರ್ ಎಂದು ತಪ್ಪಾಗಿ ಉಚ್ಚರಿಸಿಯೂ ಅವರು ಸಾಕಷ್ಟು ಸುದ್ದಿ ಮಾಡಿದ್ದರು.







