ಭಾರತೀಯ ಸೇನೆಯ ಸದರ್ನ್ ಕಮಾಂಡ್ ಮುಖ್ಯಸ್ಥರಾಗಿ ಪಿ. ಎಂ. ಹ್ಯಾರಿಸ್
ಕೋಝಿಕೋಡ್, ಸೆ.26: ಭಾರತೀಯ ಸೇನೆಯ ಸದರ್ನ್ ಕಮಾಂಡ್ ಮುಖ್ಯಸ್ಥರಾಗಿ ಲೆ.ಜ. ಪಿ.ಎಂ. ಹ್ಯಾರಿಸ್ ಅವರ ನೇಮಕ ಆವರ ಕುಟುಂಬ ವರ್ಗಕ್ಕಷ್ಟೇ ಅಲ್ಲ, ಅವರ ಗ್ರಾಮವಾದ ಚೆರುಪ್ಪದಲ್ಲಿರುವ ಕುಟ್ಟಿಕಡವು ಇಲ್ಲಿನ ಜನತೆಗೂ ಅಪಾರ ಹರ್ಷ ತಂದಿದೆ. ‘‘ಗ್ರಾಮದ ಮಹೋನ್ನತ ಪುತ್ರ’’ ಎಂದು ಅವರನ್ನು ಸಾರುವ ಬ್ಯಾನರುಗಳು ಅವರ ಹಳ್ಳಿಯಲ್ಲಿ ಕಾಣ ಸಿಗುತ್ತವೆ.
ಹ್ಯಾರಿಸ್ ಅವರು ಲೆ. ಜ. ಬಿಪಿನ್ ರಾವತ್ ಅವರಿಂದ ಹುದ್ದೆ ಸ್ವೀಕರಿಸಿದ್ದಾರೆ. ಹ್ಯಾರಿಸ್ ಅವರಿಗೆ ಭಾರತೀಯ ಸೇನೆಯಲ್ಲಿ ದೊರೆತ ಈ ಉನ್ನತ ಹುದ್ದೆ ತಮಗೆ ಅತೀವ ಸಂತಸ ತಂದಿದೆ ಹಾಗೂ ಅವರ ನಿಷ್ಠಾವಂತ ಸೇವೆಯ ಬಗ್ಗೆ ತಮಗೆ ಹೆಮ್ಮೆಯಿದೆ ಎಂದು ಅವರ ಗ್ರಾಮದ ಮಂದಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಹಲವಾರು ಉನ್ನತ ಹುದ್ದೆಗಳನ್ನು ನಿಭಾಯಿಸಿದ ಅನುಭವ ಲೆ. ಜ. ಹ್ಯಾರಿಸ್ ಅವರಿಗಿದ್ದು ಅವರು ವಿಶ್ವ ಸಂಸ್ಥೆಯಲ್ಲಿ ಮಿಲಿಟರಿ ಪರಿವೀಕ್ಷಕ, ಚೀಫ್ ಪರ್ಸನಲ್ ಆಫೀಸರ್ ಹಾಗೂ ಅಂಗೋಲಾದಲ್ಲಿ ರೀಜನಲ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇನ್‌ಫೆಂಟ್ರಿ ಸ್ಕೂಲ್ ಹಾಗೂ ಪ್ರತಿಷ್ಠಿತ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್, ವೆಲ್ಲಿಂಗ್ಟನ್ ಇಲ್ಲಿ ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರು ಪಶ್ಚಿಮ ಸೆಕ್ಟರಿನ ಬೆಟಾಲಿಯನ್ ಬ್ರಿಗೇಡ್, ಡಿವಿಶನ್ ಆ್ಯಂಡ್ ಕಾರ್ಪ್ಸ್ ಇಲ್ಲಿನ ಕಮಾಂಡರ್ ಕೂಡ ಆಗಿದ್ದರು.
ಲೆ. ಜ. ಹ್ಯಾರಿಸ್ ಅವರ ತಂದೆ ದಿ. ಪಟ್ಟಿಯರಿಮ್ಮಳ್ ಮುಹಮ್ಮದ್ ಅಲಿ ತಮಿಳುನಾಡಿನ ತಿರುಚ್ಚಿ ವಿಮಾನ ನಿಲ್ದಾಣದ ಕಮ್ಯೂನಿಕೇಶನ್ಸ್ ಅಧಿಕಾರಿಯಾಗಿದ್ದವರು.
ಹ್ಯಾರಿಸ್ ಅವರ ಪತ್ನಿ ಝರೀನಾ ಹ್ಯಾರಿಸ್ ಸೇನಾ ಕಲ್ಯಾಣ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರಲ್ಲದೆ ಮಹಿಳೆಯರ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ದಂಪತಿಗೆ ಒಬ್ಬ ಪುತ್ರ ಹಾಗೂ ಒಬ್ಬಳು ಪುತ್ರಿಯಿದ್ದು, ಅವರ ಪುತ್ರ ರೊಹೈಬ್ ಭಾರತೀಯ ಸೇನೆಯ ಮೆಕನೈಸ್ಡ್ ಇನ್‌ಫೆಂಟ್ರಿ ಬೆಟಾಲಿಯನ್ ನಲ್ಲಿ ಕಮಿಶನರ್ ಅಧಿಕಾರಿಯಾಗಿದ್ದರೆ, ಪುತ್ರಿ ಶೈಸ್ಥಾ ಬ್ರಿಟಿಷ್ ಕೌಸಿಲ್ ಶಾಲೆ ಹೊಸದಿಲ್ಲಿಯಲ್ಲಿ ಸ್ಪೆಶಲ್ ಎಜುಕೇಟರ್ ಆಗಿದ್ದಾರೆ.





