ಪ್ರಧಾನಿ ಮೋದಿಯೆಡೆಗೆ ‘56 ಇಂಚಿನ ’ ಕ್ಷಿಪಣಿ ಬಿಟ್ಟ ಶಿವಸೇನೆ!
ಮುಂಬೈ,ಸೆ.27: ಉರಿ ಭಯೋತ್ಪಾದಕ ದಾಳಿಗಳ ಬಳಿಕ ಭಾರತದ ಹೆಜ್ಜೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ಟೀಕಿಸಿರುವ ಬಿಜೆಪಿ ಪ್ರಮುಖ ಮಿತ್ರಪಕ್ಷ ಶಿವಸೇನೆಯು, ನೆರೆರಾಷ್ಟ್ರದ ಪ್ರಧಾನಿ ನವಾಝ್ ಶರೀಫ್ ಅವರು ಈಗ ‘56 ಇಂಚಿನ ಎದೆ’ಯನ್ನು ತೋರಿಸುತ್ತಿದ್ದಾರೆ ಎಂದು ಹೇಳಿದೆ.
ಭಾರತಕ್ಕೆ ತನ್ನ ಪ್ರಯತ್ನಗಳು ಜಾಗತಿಕ ನಾಯಕರಿಂದ ಬಾಯಿಮಾತಿನ ಉಪಚಾರವನ್ನು ಬಿಟ್ಟರೆ ಅಂತಹ ಹೇಳಿಕೊಳ್ಳುವಂತಹ ಫಲವನ್ನೇನೂ ನೀಡಿಲ್ಲ, ಹೀಗಾಗಿ ವಾಸ್ತವದಲ್ಲಿ ಭಾರತವನ್ನೇ ಪ್ರತ್ಯೇಕಿಸಲಾಗಿದೆಯೇ ಎಂಬ ಭಯವು ಕಾಡುತ್ತಿದೆ ಎಂದು ಅದು ಹೇಳಿದೆ.
ಉರಿ ದಾಳಿಗಳ ಕುರಿತಂತೆ ನಿಜಕ್ಕೂ ಯಾವುದೇ ರಾಷ್ಟ್ರವು ಭಾರತವನ್ನು ಬೆಂಬಲಿಸಿಲ್ಲ,ಹೀಗಾಗಿ ಜಾಗತಿಕ ಸಂಬಂಧಗಳನ್ನು ಬೆಸೆಯುವ ಭಾರತದ ಎಲ್ಲ ಪ್ರಯತ್ನಗಳು ವಿಫಲಗೊಂಡಿವೆ. ಜಾಗತಿಕ ನಾಯಕರು ಕೇವಲ ಬಾಯುಪಚಾರದ ಮಾತುಗಳನ್ನಾಡಿದ್ದಾರೆ. ಆದರೆ ಬಿಜಿಪಿಯ ಸಾಮಾಜಿಕ ಮಾಧ್ಯಮ ಕೋಶವು ಅದರಲ್ಲೇ ಇಲ್ಲದ ಅರ್ಥವನ್ನು ಕಂಡುಕೊಂಡು ಈ ವಿಷಯದಲ್ಲಿ ಪಾಕಿಸ್ತಾನವನ್ನು ಪ್ರತ್ಯೇಕಗೊಳಿಸಲಾಗಿದೆ ಎಂದು ಬೀಗುತ್ತಿದೆ ಎಂದು ಶಿವಸೇನೆಯ ಮುಖವಾಣಿ ‘ಸಾಮನಾ ’ದ ಸೋಮವಾರದ ಸಂಚಿಕೆಯ ಸಂಪಾದಕೀಯ ಲೇಖನವು ಟೀಕಿಸಿದೆ.
2014ರ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಂದರ್ಭ ಮೋದಿಯವರು, 56 ಇಂಚಿನ ಎದೆಯು ದೇಶವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬಲ್ಲುದು ಎಂದು ಹೇಳಿದ್ದು ಭಾರೀ ಸುದ್ದಿಯಾಗಿತ್ತು.
ರಷ್ಯ ಪಾಕಿಸ್ತಾನದೊಂದಿಗಿನ ಜಂಟಿ ಮಿಲಿಟರಿ ಕವಾಯತನ್ನು ನಿಲ್ಲಿಸಿಲ್ಲ, ಅತ್ತ ಚೀನಾವೂ ಭಯೋತ್ಪಾದಕರ ದಾಳಿಯನ್ನು ಖಂಡಿಸಿಲ್ಲ. ಇಂಡೋನೇಷ್ಯಾ ಪಾಕಿಸ್ತಾನಕ್ಕೆ ರಕ್ಷಣಾ ಉಪಕರಣಗಳನ್ನು ನೀಡಲು ಮುಂದಾಗಿದೆ. ಮುಸ್ಲಿಮ್ ಸಂಘಟನೆಗಳು ಪಾಕಿಸ್ತಾನವನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿವೆ. ನೇಪಾಳವು ಕೂಡ ಅದರೊಡನೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳಲು ಬಯಸುತ್ತಿದೆ ಎಂದು ಸೇನೆಯು ಬೆಟ್ಟು ಮಾಡಿದೆ.
ಪಾಕಿಸ್ತಾನವು ಈಗಾಗಲೇ ಭಾರತದ ವಿರುದ್ಧ ಯುದ್ಧವನ್ನು ಘೋಷಿಸಿದೆ. ಪಠಾಣಕೋಟ್‌ನಿಂದ ಉರಿಯವರೆಗೆೆ ಅದು ನಮ್ಮ ಯೋಧರ ರಕ್ತವನ್ನು ಹರಿಸುತ್ತಲೇ ಬಂದಿದೆ,ಆದರೆ ನಾವು ಪಾಕಿಸ್ತಾನಕ್ಕೆ ಬೆದರಿಕೆಗಳನ್ನು ಒಡ್ಡುವುದಕ್ಕಷ್ಟೇ ಸಮಾಧಾನ ಪಟ್ಟುಕೊಳ್ಳುತ್ತಿದ್ದೇವೆ. ಕೇವಲ ಮಾತುಗಳಿಂದ ಈಗೇನೂ ಆಗದು. ಏಟಿಗೆ ಎದಿರೇಟು ನೀಡಲು ಈಗ ಸಕಾಲವಾಗಿದೆ ಎಂದು ಶಿವಸೇನೆ ಹೇಳಿದೆ.





