ಕಾವೇರಿ ವಿವಾದ: ಇಂದು ರಾಜ್ಯದ ಅರ್ಜಿ ವಿಚಾರಣೆ
ಡಿಸೆಂಬರ್‌ವರೆಗೆ ನೀರು ಬಿಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌ಗೆ ರಾಜ್ಯದ ಸ್ಪಷ್ಟನೆ

ಸುಪ್ರೀಂ ಆದೇಶ ಪಾಲನೆಯವರೆಗೆ ಕರ್ನಾಟಕದ ಅರ್ಜಿಯ ವಿಚಾರಣೆ ನಡೆಸದಿರಲು ತಮಿಳುನಾಡು ಆಗ್ರಹ
ಹೊಸದಿಲ್ಲಿ,ಸೆ.26: ರಾಜ್ಯದ ಪ್ರಮುಖ ನಗರಗಳಲ್ಲಿ ಕುಡಿಯುವ ನೀರಿನ ಕೊರತೆಯಿರುವುದರಿಂದ ಡಿಸೆಂಬರ್‌ಗೆ ಮುನ್ನ ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಬಿಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕವು ಇಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿತು.
ತನ್ನ ಜಲಾಶಯಗಳಲ್ಲಿ ಸಾಕಷ್ಟು ನೀರು ಇಲ್ಲದಿರುವುದರಿಂದ ಸೆ.27ರವರೆಗೆ ತಮಿಳುನಾಡಿಗೆ ಪ್ರತಿದಿನ 6,000 ಕ್ಯೂಸೆಕ್ ನೀರು ಬಿಡುವಂತೆ ನೀಡಿರುವ ಸೆ.20ರ ಆದೇಶವನ್ನು ಪರಿಷ್ಕರಿಸುವಂತೆ ಕೋರಿ ಕರ್ನಾಟಕ ಸರಕಾರವು ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ. ಇದೇ ವೇಳೆ ಕರ್ನಾಟಕವು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವವರೆಗೆ ಅದರ ಮೇಲ್ಮನವಿಯನ್ನು ವಿಚಾರಣೆಗೆತ್ತಿಕೊಳ್ಳದಂತೆ ತಮಿಳುನಾಡು ಅರ್ಜಿಯನ್ನು ದಾಖಲಿಸಿದ್ದು, ಇಂದು ಈ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಿದ್ದ ಪೀಠವು ಕರ್ನಾಟಕದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಲಿದೆ.
ತನ್ನಲ್ಲಿಯೇ ಕುಡಿಯುವ ನೀರಿನ ಅಭಾವವಿದ್ದು, ತನ್ನ ಅಗತ್ಯವನ್ನು ಮೊದಲು ಪೂರೈಸಿಕೊಳ್ಳುವ ಅಗತ್ಯವಿದೆ. ಹೀಗಾಗಿ ವರ್ಷದ ಕೊನೆ ಯಲ್ಲಷ್ಟೇ ತಮಿಳುನಾಡಿಗೆ ತಾನು ಕಾವೇರಿ ನೀರನ್ನು ಬಿಡುಗಡೆ ಮಾಡ ಬಹುದಾಗಿದೆ ಎಂದು ಕರ್ನಾಟಕವು ತನ್ನ ಮೇಲ್ಮನವಿಯಲ್ಲಿ ತಿಳಿಸಿದೆ.
ಸೆ.20ರಂದು ನಡೆದಿದ್ದ ವಿಚಾರಣೆ ಸಂದರ್ಭ ಕಾವೇರಿ ಮೇಲುಸ್ತುವಾರಿ ಸಮಿತಿಯು ನಿಗದಿಗೊಳಿಸಿದ್ದ ಪ್ರತಿ ದಿನ 3,000 ಕ್ಯೂಸೆಕ್ ಬದಲು 6,000 ಕ್ಯೂಸೆಕ್ ನೀರನ್ನು ಸೆ.27ರವರೆಗೆ ತಮಿಳುನಾಡಿಗೆ ಹರಿಸುವಂತೆ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠವು ಕರ್ನಾಟಕಕ್ಕೆ ಆದೇಶಿಸಿತ್ತು. ಬೆಂಗಳೂರು ಸೇರಿದಂತೆ ತನ್ನ ನಗರಗಳಿಗೆ ಕುಡಿಯುವ ನೀರು ಪೂರೈಕೆಗೂ ಸಾಕಷ್ಟು ನೀರಿಲ್ಲ ಎನ್ನುವುದೂ ಸೇರಿದಂತೆ ವಿವಿಧ ಕಾರಣಗಳಿಂದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ತನ್ನ ಅಸಮರ್ಥತೆಯನ್ನು ಕರ್ನಾಟಕವು ತನ್ನ ಸೋಮವಾರದ ಅರ್ಜಿಯಲ್ಲಿ ವ್ಯಕ್ತಪಡಿಸಿದೆ.
ಕಾವೇರಿ ನದಿ ನೀರು ನ್ಯಾಯಾಧಿಕರಣವು ತನ್ನ ತೀರ್ಪಿನಲ್ಲಿ ಆದೇಶಿಸಿರುವಂತೆ ನಾಲ್ಕು ವಾರಗಳಲ್ಲಿ ಕಾವೇರಿ ಜಲ ನಿರ್ವಹಣೆ ಮಂಡಳಿಯನ್ನು ರಚಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೆ.20ರಂದು ಕೇಂದ್ರ ಸರಕಾರಕ್ಕೂ ನಿರ್ದೇಶ ನೀಡಿತ್ತು.







