ಹೋಮ್ ಸ್ಟೇ ನೋಂದಣಿ ಕಡ್ಡಾಯ: ಸಚಿವ ಪ್ರಿಯಾಂಕ ಖರ್ಗೆ
ವಿನೂತನ ರೀತಿಯಲ್ಲಿ‘ವಿಶ್ವಪ್ರವಾಸೋದ್ಯಮ ದಿನಾಚರಣೆ’

ಬೆಂಗಳೂರು, ಸೆ.26: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಸೆ.27ರಂದು ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿನೂತನ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ‘ಪಿಚ್ ಟು ದಿ ಗವರ್ನಮೆಂಟ್’ ಹ್ಯಾಕಥಾನ್ ಏರ್ಪಡಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಾರ್ಟ್‌ಅಪ್ ಘಟಕ, ಐಟಿ-ಬಿಟಿ ಇಲಾಖೆ ಸೇರಿ ವಿವಿಧ ಕಂಪೆನಿಗಳ ಆಶ್ರಯದಲ್ಲಿ ಸ್ಟಾರ್ಟ್‌ಅಪ್ ಕಂಪೆನಿಗಳ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಯೋಜಿಸಲಾಗಿದೆ ಎಂದರು.
ಪ್ರವಾಸಿ ಮಾಹಿತಿಗೆ ‘ಪ್ರಥಮ’: ರಾಜ್ಯದಲ್ಲಿನ ಪ್ರವಾಸೋದ್ಯಮ ವಲಯಗಳ ಆನ್‌ಲೈನ್ ಮಾಹಿತಿಗೆ ದೇಶದಲ್ಲೆ ಪ್ರಪ್ರಥಮ ಬಾರಿಗೆ ‘ಪ್ರಥಮ’ ವೆಬ್‌ಸೈಟ್ ಆರಂಭಿಸಲಾಗಿದೆ. ಪ್ರವಾಸಿಗರಿಗೆ ರಾಜ್ಯದಲ್ಲಿನ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ದೊರೆಯಲಿದೆ ಎಂದರು.
ಹೆರಿಟೇಜ್ ಬೈಸಿಕಲ್ ರೈಡ್: ಬೆಂಗಳೂರಿನ ಪ್ರವಾಸಿ ತಾಣಗಳನ್ನು ಜನರಿಗೆ ಪರಿಚಯಿಸುವ ಮೂಲಕ ಪ್ರವಾಸೋದ್ಯಮ ಉತ್ತೇಜಿಸಲು ‘ಬಸವನಗುಡಿ ಪಾರಂಪರಿಕ ಪರ್ಯಟನೆ ಮತ್ತು ಬೆಂಗಳೂರು ಇತಿಹಾಸ ಪರ್ಯಟನೆ’ ಎಂಬ ಸೈಕಲ್ ಯಾತ್ರೆ ಆಯೋಜಿಸಿದ್ದು, ನಮ್ಮ ಸೈಕಲ್ ತಂಡದಲ್ಲಿ ನಡೆಯಲಿದೆ ಎಂದರು.
ಪ್ರವಾಸ: ಕೆಎಸ್‌ಟಿಡಿಸಿ ಸಹಯೋಗದಲ್ಲಿ ಬಿಬಿಎಂಪಿ ಆಯ್ದ ಶಾಲಾ ಮಕ್ಕಳಿಗೆ ನಗರದಲ್ಲಿನ 151 ವರ್ಷಗಳಷ್ಟು ಪುರಾತನವಾದ ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯಕ್ಕೆ ಪ್ರವಾಸಕ್ಕೆ ಕರೆದೊಯ್ಯಲಾಗುವುದು. ಅಲ್ಲದೆ, ಮುಂಬರುವ ದಿನಗಳಲ್ಲಿ ಎಲ್ಲ ಶಾಲಾ ಮಕ್ಕಳಿಗೆ ಇದನ್ನು ಪರಿಚಯಿಸಲು ಉದ್ದೇಶಿಸಲಾಗಿದೆ ಎಂದರು.
ಪ್ರವಾಸೋದ್ಯಮ ದಿನದ ಅಂಗವಾಗಿ ‘ವಿಶ್ವ ಪರಂಪರೆ ಮತ್ತು ಪರಿಸರ’ ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಎರಡು ಅತ್ಯುತ್ತಮ ಛಾಯಾಚಿತ್ರಗಳನ್ನು ಆಯ್ಕೆ ಮಾಡಿದ್ದು ತಲಾ 25 ಸಾವಿರ ರೂ. ಹಾಗೂ 15 ಸಾವಿರ ರೂ. ನಗದು ಬಹುಮಾನ ನೀಡಲಾಗಿದೆ ಎಂದರು.
ಹೋಮ್ ಸ್ಟೇ ನೋಂದಣಿ ಕಡ್ಡಾಯ: ರಾಜ್ಯದಲ್ಲಿನ ಎಲ್ಲ ಹೋಮ್ ಸ್ಟೇಗಳು ನವೆಂಬರ್ 15ರ ಒಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದರೆ ಅನಧಿಕೃತ ಎಂದು ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.
ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕೊಡಗು ಹಾಗೂ ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೋಮ್ ಸ್ಟೇಗಳಿದ್ದು, ಎಲ್ಲರೂ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಹೀಗೆ ನೋಂದಣಿ ಮಾಡಿಕೊಂಡ ಹೋಮ್ ಸ್ಟೇಗಳಲ್ಲಿನ ಮೂಲಭೂತ ಸೌಕರ್ಯಗಳು ಹಾಗೂ ಸೇವೆಯನ್ನು ಆಧರಿಸಿ ‘ರೇಟಿಂಗ್’ ನೀಡಲಾಗುವುದು ಎಂದರು.
ಉತ್ತಮ ದರ್ಜೆಯ ಹೋಮ್ ಸ್ಟೇಗಳನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಉತ್ತೇಜಿಸುವುದಲ್ಲದೆ, ಇಲಾಖೆ ವೆಬ್‌ಸೈಟ್‌ಗಳಲ್ಲಿ ಸೇರ್ಪಡೆ ಮಾಡಲಾಗುವುದು ಎಂದ ಪ್ರಿಯಾಂಕ ಖರ್ಗೆ, ಪ್ರವಾಸೋದ್ಯಮ ಉತ್ತೇಜನಕ್ಕೆ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.





