ಮಂಗಳೂರಿಗೆ ಬಯಲು ಬಹಿರ್ದೆಸೆ ಮುಕ್ತ ನಗರದ ಹಿರಿಮೆ

ಮಂಗಳೂರು, ಸೆ.26: ದೇಶದಲ್ಲಿರುವ ಒಂದು ಲಕ್ಷದಿಂದ ಐದು ಲಕ್ಷ ಜನಸಂಖ್ಯೆಯ ನಗರಗಳ ಪೈಕಿ ಮಂಗಳೂರು ಬಯಲು ಬಹಿರ್ದೆಸೆ ಮುಕ್ತ ನಗರ ಎಂಬುದಾಗಿ ಘೋಷಿಸಲು ಕೇಂದ್ರ ನಗರಾಭಿವೃದ್ಧಿ ಇಲಾಖೆ ಮತ್ತು ಸ್ವಚ್ಛ ಭಾರತ ಮಿಷನ್ ಮುಂದಾಗಿವೆ. ಬುಧವಾರ ಈ ಸಂಬಂಧ ಮಹಾನಗರ ಪಾಲಿಕೆ ಆಡಳಿತಕ್ಕೆ ಅಧಿಕೃತವಾದ ಪ್ರಮಾಣಪತ್ರವನ್ನು ಹಸ್ತಾಂತರ ಮಾಡಲಾಗುತ್ತಿದೆ.
ಸೋಮವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ವಿಶೇಷ ಸಭೆಯಲ್ಲಿ ಈ ವಿಷಯ ಪ್ರಕಟಿಸಿದ ಮೇಯರ್ ಹರಿನಾಥ್, ‘ಅತ್ಯಂತ ಕಡಿಮೆ ಅವಧಿಯಲ್ಲಿ ಮಂಗಳೂರು ನಗರಕ್ಕೆ ಈ ಕೀರ್ತಿ ಲಭ್ಯವಾಗಿದೆ. ದೇಶದ ಐದು ಲಕ್ಷ ಜನಸಂಖ್ಯೆಯೊಳಗಿನ ನಗರಗಳಲ್ಲಿ ಮಂಗಳೂರು ಬಯಲು ಬಹಿರ್ದೆಸೆ ಮುಕ್ತ ನಗರ ಎಂಬ ಪ್ರಶಂಸೆಗೆ ಪಾತ್ರವಾಗುತ್ತಿರುವುದು ಪಾಲಿಕೆ ಆಡಳಿತಕ್ಕೆ ಅತ್ಯಂತ ಸಂತಸದ ವಿಚಾರ’ ಎಂದರು.
ಪಾಲಿಕೆ ಸದಸ್ಯರು, ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿ, ಸಾರ್ವಜನಿಕರು ಮತ್ತು ಸ್ವಸಹಾಯ ಸಂಘಗಳ ಪ್ರಯತ್ನದ ಫಲವಾಗಿ ಬಯಲು ಬಹಿರ್ದೆಸೆ ಮುಕ್ತ ನಗರ ಎಂಬ ಮಾನ್ಯತೆ ದೊರೆತಿದೆ. ನಗರಗಳ ಸ್ವಚ್ಛತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 2017ರ ಜನವರಿ ಮತ್ತು ಫೆಬ್ರುವರಿಯಲ್ಲಿ ‘ಸ್ವಚ್ಛ ಸರ್ವೇಕ್ಷಣ್’ ಸಮೀಕ್ಷೆಯನ್ನು ನಡೆಸಲಿದೆ. ಈ ಬಾರಿ ನಗರಕ್ಕೆ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಜೀರ್ ಮಾತನಾಡಿ, ‘ಕೇಂದ್ರ ನಗರಾಭಿವೃದ್ಧಿ ಇಲಾಖೆ ಮತ್ತು ಸ್ವಚ್ಛ ಭಾರತ ಮಿಷನ್ ವತಿಯಿಂದ ಬಯಲು ಬಹಿರ್ದೆಸೆ ಮುಕ್ತ ನಗರಗಳನ್ನು ಗುರುತಿಸಲು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯುಸಿಐ) ಮೂಲಕ ಸಮೀಕ್ಷೆ ನಡೆಸಲಾಗಿದೆ. ಇದೇ 23ರಿಂದ 25ರವರೆಗೆ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದ ಕ್ಯುಸಿಐ ಪ್ರತಿನಿಧಿಗಳು ಸಮೀಕ್ಷೆ ನಡೆಸಿದ್ದರು. ನಗರಪಾಲಿಕೆ ಮೇಯರ್ ಮತ್ತು ಆಯುಕ್ತರು ಸಲ್ಲಿಸಿದ್ದ ಮಾಹಿತಿಗಳ ಬಗ್ಗೆ ತಪಾಸಣೆ ನಡೆಸಿದ್ದರು. ಎಲ್ಲಾ ನಗರಗಳ ಸಮೀಕ್ಷೆ ಮುಗಿದ ಬಳಿಕ ತೀರ್ಮಾನ ಪ್ರಕಟಿಸಲಾಗುತ್ತಿದೆ’ ಎಂದರು.
ನಗರವನ್ನು ಬಯಲು ಬಹಿರ್ದೆಸೆಯಿಂದ ಮುಕ್ತಗೊಳಿಸುವುದು ಮತ್ತು ಘನತ್ಯಾಜ್ಯ ವಿಲೇವಾರಿ ಸಂಬಂಧ ಕೇಂದ್ರ ನಗರಾಭಿವೃದ್ಧಿ ಇಲಾಖೆ ಹಾಗೂ ಸ್ವಚ್ಛ ಭಾರತ ಮಿಷನ್‌ನ ಸೂಚನೆಗಳನ್ನು ಪಾಲಿಕೆ ಆಡಳಿತವು ಅನುಷ್ಠಾನಕ್ಕೆ ತರುತ್ತಿದೆ ಎಂದವರು ಹೇಳಿದರು.







