ಸಮುದ್ರ ಕ್ರೀಡೆಗೆ ಆದ್ಯತೆ: ಚರ್ಚೆ
ಪಣಂಬೂರು, ಸೆ.26: ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿ, ಸಮುದ್ರ ಕ್ರೀಡೆಗೆ ಆದ್ಯತೆ ಕುರಿತು ಪಣಂಬೂರು ಬೀಚ್‌ನಲ್ಲಿ ಇಂದು ವಿಶೇಷ ಚರ್ಚೆ ನಡೆಯಿತು. ಕೆಸಿಸಿಐ, ಪಣಂಬೂರು ಬೀಚ್ ಅಭಿವೃದ್ಧಿ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಚರ್ಚೆಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಕೊರತೆಯಿಂದ ಅಭಿವೃದ್ಧಿಗೆ ಮಾರಕವಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಯಿತು.
ಸಮುದ್ರ ತೀರ ಹೊಂದಿದ ಮಾಲ್ಡಿವ್ಸ್, ಗೋವಾ ಮೊದಲಾದೆಡೆ ಸರ್ಫಿಂಗ್‌ಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ. ಸರ್ಫಿಂಗ್ ಕ್ಲಬ್, ಬೀಚ್‌ಕ್ಲಬ್ ಮತ್ತಿತರ ಸಂಸ್ಥೆಗಳ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ಕರ್ನಾಟಕದ ಕರಾವಳಿ ಪ್ರದೇಶಗಳಲ್ಲೂ ಅಭಿವೃದ್ಧಿ ಪೂರಕ ವ್ಯವಸ್ಥೆಯಿದ್ದು, ಇಲಾಖೆ ಈ ಕುರಿತು ಗಮನ ಹರಿಸಬೇಕು ಎಂದು ಕೆಸಿಸಿಐನ ಅಧ್ಯಕ್ಷ ಜೀವನ್ ಸಲ್ಡಾನಾ ಅಭಿಪ್ರಾಯಿಸಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ್ ಬೈಕಂಪಾಡಿ, ಮನಪಾ ಕಮೀಷನರ್ ಮುಹಮ್ಮದ್ ನಝೀರ್ ಮಾತನಾಡಿದರು. ಪ್ರವಾಸೋದ್ಯಮ ವಿಭಾಗದ ಸಲಹೆಗಾರರು, ರೆಸಾರ್ಟ್‌ಗಳ ಪ್ರಮುಖರು ಉಪಸ್ಥಿತರಿದ್ದರು.





