ಕಾಂಗ್ರೆಸ್ ಮುಖಂಡನಿಂದ 47 ಮಂದಿಯ ಮತಾಂತರ: ಬಜರಂಗದಳ ಆರೋಪ
ಪುತ್ತೂರು, ಸೆ.27: ದ.ಕ.ಜಿಲ್ಲೆಯಲ್ಲಿ ಮತಾಂತರ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದ್ದು, ಮುಸ್ಲಿಂ ಸಮುದಾಯಕ್ಕೆ ಸೇರಿದ ಈ ಭಾಗದ ಕಾಂಗ್ರೆಸ್ ಮುಖಂಡರೊಬ್ಬರು 2009ರಲ್ಲಿ 47 ಮಂದಿ ಹಿಂದೂ ಯುವಕರನ್ನು ಪೊನ್ನಾಣಿಗೆ ಕರೆದುಕೊಂಡು ಹೋಗಿ ಮತಾಂತರ ಮಾಡಿಸಿದ್ದು, ಈ ಬಗ್ಗೆ ಪುರಾವೆಗಳು ನಮ್ಮಲ್ಲಿದೆ ಎಂದು ಬಜರಂಗದಳ ಮಂಗಳೂರು ವಿಭಾಗ ಸಹ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಾಂತರದ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ. ಹಿಂದೂ ಯುವಕರನ್ನು ಮತಾಂತರಗೊಳಿಸಿ ದುರುದ್ದೇಶಗಳಿಗೆ ಬಳಸಿಕೊಳ್ಳುವ ಷಡ್ಯಂತ್ರ ಇದಾಗಿದೆ. ಮತಾಂತರಗೊಳಿಸಲಾದ ಈ ಭಾಗದ 47 ಮಂದಿ ಯುವಕರ ಪೈಕಿ ಮೂವರ ಮನವೊಲಿಸಿ ಘರ್ ವಾಪಸಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘ ಪರಿವಾರದ ಮುಖಂಡ ಅರುಣ್‌ಕುಮಾರ್ ಪುತ್ತಿಲ ಮಾತನಾಡಿ, ಸುಳ್ಯದಲ್ಲಿ ಮತಾಂತರವನ್ನು ವಿರೋಧಿಸಿ ಹತ್ತು -ಹದಿನೈದು ಸಾವಿರ ಮಂದಿ ಸೇರಿ ಬೃಹತ್ ಪ್ರತಿಟನೆ ಮಾಡಿದ್ದರು. ದೀಕ್ಷಿತ್ ಎಂಬ ಯುವಕನ ಮತಾಂತರ ಪ್ರಕರಣ ನಡೆದಿದೆ ಎಂಬ ಕಾರಣಕ್ಕಾಗಿ ಪ್ರತಿಭಟನೆಗೆ ಅಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದರು. ಇಲ್ಲದಿದ್ದಲ್ಲಿ ಪ್ರಚಾರ ನಡೆಸದೆ ಅಷ್ಟೊಂದು ಸಂಖ್ಯೆಯಲ್ಲಿ ಜನ ಸೇರಲು ಸಾಧ್ಯವಿರಲಿಲ್ಲ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ದೀಕ್ಷಿತ್‌ನ ಬಳಿಗೆ ಹೋಗಿ ‘ತಾನು ಮತಾಂತರ ಆಗಿಲ್ಲ’ ಎಂಬ ಹೇಳಿಕೆಯನ್ನು ಆತನ ಮೂಲಕ ಕೊಡಿಸಿದ್ದಾರೆ. ಅಲ್ಲದೆ ಮತಾಂತರ ನಡೆದಿಲ್ಲ ಎಂದು ತಿಳಿಸಿದ್ದಾರೆ. ಇದು ಪ್ರತಿಟನೆಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದರು.
ಕಾಂಗ್ರೆಸ್ ಸರಕಾರ ಇದ್ದಷ್ಟು ದಿನ ಹಿಂದೂಗಳ ಹೋರಾಟವನ್ನು ಹತ್ತಿಕ್ಕುವ ಮತ್ತು ಖಂಡಿಸುವ ಕೆಲಸಗಳು ಆಗುತ್ತಲೇ ಇರುತ್ತದೆ, ಇದು ಇತಿಹಾಸ ಎಂದ ಅವರು ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದಿಂದ ಮತಾಂತರ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನವನ್ನು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಕೈಯಿಂದ ಮತ್ತೆ ಸರ್ಕಾರ ವಶಪಡಿಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಸುಳಿವು ನೀಡಿರುವುದನ್ನು ಅರುಣ್ ಕುಮಾರ್ ಪುತ್ತಿಲ ಖಂಡಿಸಿದರು. ಹೀಗೇನಾದರೂ ಆದರೆ ಉಗ್ರ ಹೋರಾಟ ನಡೆಸಲಾಗುವುದು ಎಂದವರು ಎಚ್ಚರಿಸಿದರು.
ಗೋಕರ್ಣ ದೇವಾಲಯ ಹಿಂದಿನಿಂದಲೇ ರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟಿತ್ತು. ಬಳಿಕ ಅದನ್ನು ಸರಕಾರ ತನ್ನ ವಶಕ್ಕೆ ಪಡೆಯಿತು. 2008ರಲ್ಲಿ ಮತ್ತೆ ಮಠಕ್ಕೆ ಹಸ್ತಾಂತರಿಸುವ ಕೆಲಸ ರಾಜ್ಯ ಸರಕಾರದಿಂದ ನಡೆದಿದೆ. ಇದೀಗ ಸರಕಾರ ಇನ್ನೊಮ್ಮೆ ಸ್ವಾಧೀನ ಮಾಡಿಕೊಳ್ಳುವ ಯತ್ನ ನಡೆಸುತ್ತಿರುವುದು ಹಿಂದೂ ವಿರೋಧಿ ನೀತಿಯಾಗಿದೆ ಎಂದು ದೂರಿದರು.
ಪುತ್ತೂರು ಪರಸರದ ಹಿಂದೂ ಯುವಕನೊಬ್ಬನನ್ನು ಮತಾಂತರಗೊಳಿಸಲಾಗಿದೆ ಎಂಬ ವದಂತಿ ಇದೆ. ಈ ಹಿನ್ನಲೆಯಲ್ಲಿ ಆತನ ಚಲನವಲನಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಮತಾಂತರ ಪ್ರಯತ್ನ ನಡೆದಿದ್ದಲ್ಲಿ ಇಲ್ಲಿಯೂ ಹೋರಾಟ ಆರಂಭಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ತಾಲೂಕು ಸಂಚಾಲಕ ಅಜಿತ್ ರೈ ಹೊಸಮನೆ, ಉದ್ಯಮಿ ಕೃಷ್ಣನಾರಾಯಣ ಮುಳಿಯ, ಶಿವರಾಜ್ ಉಪಸ್ಥಿತರಿದ್ದರು.







