ಮತಾಂತರ ನೆಪದಲ್ಲಿ ಶಾಂತಿಭಂಗಕ್ಕೆ ಯತ್ನ: ಸಚಿವ ರೈ

ಸುಳ್ಯ, ಸೆ.27: ಮತಾಂತರದ ಆರೋಪಕ್ಕೆ ಒಳಗಾದ ಅರಂಬೂರಿನ ದೀಕ್ಷಿತ್ ಗೌಡರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಸಚಿವರು, ದೀಕ್ಷಿತ್ ಮತಾಂತರವಾಗಿಲ್ಲ ಈ ಬಗ್ಗೆ ಆತನೇ ಸ್ವತಃ ಹೇಳಿಕೆ ನೀಡಿದ್ದಾನೆ. ಮನೆಯವರು ನಾಪತ್ತೆ ಕುರಿತು ದೂರು ನೀಡಿದ್ದಾರೆ. ಇದೆಲ್ಲ ಗೊತ್ತಿದ್ದು ಅನವಶ್ಯಕವಾಗಿ ಮತಾಂತರ ವದಂತಿ ಹಬ್ಬಿಸಿ ರಾಜಕೀಯ ಲಾಭ ಗಳಿಸುವ ಹುನ್ನಾರ ನಡೆಯುತ್ತಿದೆ ಎಂದು ಅವರು ಹೇಳಿದರು.
ಕೆಲವರು ಓಟಿಗಾಗಿ ಈ ರೀತಿ ಮಾಡುತ್ತಿದ್ದಾರೆ. ಮೊನ್ನೆಯ ಮೆರವಣಿಗೆಗೆ ಮಕ್ಕಳನ್ನು ಬಳಸಿಕೊಂಡಿರುವುದು ಸರಿಯಲ್ಲ. ಯಾವ ಶಿಕ್ಷಣ ಸಂಸ್ಥೆಯವರ ಮಕ್ಕಳು ಇದರಲ್ಲಿ ಭಾಗವಹಿಸಿದ್ದಾರೋ ಆ ಶಾಲೆಯ ಒಪ್ಪಿಗೆ ಇದ್ದು ಮಕ್ಕಳು ಹೋಗಿದ್ದರೆ ಶಾಲೆ, ಕಾಲೇಜಿನ ಮುಖ್ಯಸ್ಥರ ಮೇಲೆ ಕ್ರಮ ಆಗಬೇಕು. ಮಕ್ಕಳೇ ಸ್ವಯಂ ಆಗಿ ಹೋಗಿದ್ದರೆ ಆ ಶಾಲೆಯವರು ಮಕ್ಕಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಈ ಬಗ್ಗೆ ಈಗಾಗಲೇ ಮಂಗಳೂರಿನಲ್ಲಿ ಡಿಸಿ., ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ ಎಂದು ಸಚಿವರು ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪಗೌಡ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಎಸ್.ಸಂಶುದ್ದೀನ್, ಡಾ.ರಘು, ಪಿ.ಎ.ಮುಹಮ್ಮದ್ ಉಪಸ್ಥಿತರಿದ್ದರು.





